ಬೆಳಗಾವಿಯ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಭಾನುವಾರ ಜರುಗಿದ ರಕ್ತದಾನ ಶಿಬಿರದಲ್ಲಿ ನವಿನ ಎನ್, ಡಾ.ಸಂಜಯ ಕಂಬಾರ, ಡಾ.ಅಶೋಕ ಅಲತಗಿ, ಡಾ.ಜೀವನ ಜೋಶಿ ಇತರರಿದ್ದರು.
ಬೆಳಗಾವಿ : ದಾನಗಳಲ್ಲಿ ರಕ್ತ ದಾನ ಶ್ರೇಷ್ಠ ದಾನ. ಜೀವಂತವಿರುವಾಗ ಪದೇ ಪದೇ ನಮ್ಮ ದೇಹದಿಂದ ಕೊಡಬಹುದಾದ ಏಕೈಕ ದಾನ ರಕ್ತ ಮಾತ್ರ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ನವಿನ ಎನ್. ಹೇಳಿದರು.
ಯಳ್ಳೂರ ರಸ್ತೆಯಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ರಕ್ತ ಭಂಡಾರದಲ್ಲಿ ಭಾನುವಾರ ಜರುಗಿದ ವಿಶ್ವ ರಕ್ತ ದಾನಿಗಳ ದಿನಾಚರಣೆ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ವೈದ್ಯ ವಿಜ್ಞಾನ ಎಷ್ಟೇ ಮುಂದುವರೆದರೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ರಕ್ತದಾನ ಮಾಡಿ ಇನ್ನೊಂದು ಜೀವಕ್ಕೆ ಆಧಾರವಾಗಬೇಕು ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ಮಾತನಾಡಿ, ರಕ್ತದಾನವು ಜೀವದಾನಕ್ಕೆ ಸಮಾನವಾದ ಮಹಾದಾನವಾಗಿದೆ. ಈಚಿನ ದಿನಗಳಲ್ಲಿ ಅನೇಕ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಅನೇಕರಿಗೆ ರಕ್ತದ ಅವಶ್ಯಕತೆ ಇದೆ. ಆರೋಗ್ಯವಂತರು ನಿಯಮಿತ ರಕ್ತದಾನದಿಂದ ಅನೇಕರ ಜೀವ ಉಳಿಸಬಹುದು. ಆದರೆ, ಎಷ್ಟೋ ಜನರಲ್ಲಿ ದೇಹದಲ್ಲಿನ ರಕ್ತ ಕಡಿಮೆಯಾಗುತ್ತದೆ, ಶಕ್ತಿ ಕುಂದುತ್ತದೆ ಎಂಬುದು ಸೇರಿ ಅನೇಕ ತಪ್ಪು ಕಲ್ಪನೆಗಳಿವೆ. ಈ ಗೊಂದಲಗಳನ್ನು ಸರಿಪಡಿಸಿ ರಕ್ತದಾನಕ್ಕೆ ಜನರನ್ನು ಪ್ರೇರಿಸುವ ಕಾರ್ಯ ಹೆಚ್ಚಿನ ರೀತಿಯಲ್ಲಿ ಆಗಬೇಕಿದೆ ಎಂದು ತಿಳಿಸಿದರು.
ಯುಎಸ್‌ಎಂ ಕೆಎಲ್‌ಇ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ, ಸ್ವಯಂಪ್ರೇರಿತವಾಗಿ ರಕ್ತದಾನ ದಾನಿಗಳನ್ನು ಅಭಿನಂದಿಸಿದರು. ಈ ವೇಳೆ ಆಸ್ಪತ್ರೆಯ 18ಕ್ಕೂ ಹೆಚ್ಚು ಸಿಬ್ಬಂದಿ ಸಹ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಸಾಮಾಜಿಕ ಜವಾಬ್ದಾರಿಗೆ ಮಾದರಿಯಾದರು.
ರಕ್ತ ಭಂಡಾರ ಮುಖ್ಯಸ್ಥ ಡಾ.ಅಶೋಕ ಅಲತಗಿ, ಡಾ.ಜೀವನ ಜೋಶಿ, ನರ್ಸಿಂಗ್ ಸೂಪರಿಂಟೆಂಡೆಂಟ್ ಶರೀಫಾ ಸಯ್ಯದ, ರಕ್ತ ದಾನಿಗಳು, ತಂತ್ರಜ್ಞರು ಮತ್ತು ಆಸ್ಪತ್ರೆಯ ಸಿಬ್ಬಂದಿ ಇದ್ದರು.