ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಚಿವ ಸತೀಶ ಜಾರಕಿಹೊಳಿ ರಕ್ತದಾನ ಶಿಬಿರದ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿದರು. ಮೊಹಮ್ಮದ್ ರೋಷನ್, ರಾಹುಲ ಶಿಂಧೆ, ಭೂಷಣ ಬೋರಸೆ, ಕೆ.ರಾಮರಾಜನ್ ಇತರರಿದ್ದರು.
ಈ ಬಾರಿ ಶಿಕ್ಷಕರ ದಿನವನ್ನು ವಿಶಿಷ್ಟ ವಾಗಿ ಆಚರಿಸಲು ಮುಂದಾಗಿರುವ ಜಿಪಂ ಶಿಕ್ಷಕರಿಗೆ ಹೂವು, ಶುಭಾಶಯ ಬದಲು, ಜೀವ ಉಳಿಸುವ ರಕ್ತದಾನ ಮಾಡುವ ಮೂಲಕ ಗೌರವ ಸಲ್ಲಿಸುವ ವಿನೂತನ ಕಾರ್ಯಕ್ರಮವನ್ನು ಸೆ.3ರಂದು 14 ತಾಲೂಕುಗಳಲ್ಲಿ ಹಮ್ಮಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಬಿರದ ಪೋಸ್ಟರ್ ಹಾಗೂ ಪ್ರಚಾರ ಸಾಮಗ್ರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕು ಕೇಂದ್ರಗಳಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಶಿಕ್ಷಕರು, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಜಿಪಂ ಸಿಇಒ ರಾಹುಲ ಶಿಂಧೆ ಮಾತನಾಡಿ, ಜಿಲ್ಲಾ ಪಂಚಾಯಿತಿ ಹಾಗೂ ಅಧೀನ ಇಲಾಖೆಗಳ ಸಹಯೋಗದಲ್ಲಿ ಶಿಬಿರದ ಸಿದ್ಧತೆ ನಡೆಯುತ್ತಿದೆ. ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ರಕ್ತದಾನಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜಿಲ್ಲಾದ್ಯಂತ 10 ಸಾವಿರಕ್ಕೂ ಅಧಿಕ ಮಂದಿ ರಕ್ತದಾನ ಮಾಡುವ ನಿರೀಕ್ಷೆ ಇದೆ. ಶಿಕ್ಷಕರ ದಿನಾಚರಣೆಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಸಮಾಜಕ್ಕೆ ಉಪಯುಕ್ತ ಕಾರ್ಯದ ಮೂಲಕ ಅರ್ಥಪೂರ್ಣವಾಗಿಸುವ ಪ್ರಯತ್ನ ಇದಾಗಿದೆ ಎಂದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಎಸ್‌ಪಿ ಕೆ.ರಾಮರಾಜನ್ ಇತರರಿದ್ದರು.