ಸತೀಶ ಜಾರಕಿಹೊಳಿ ರಕ್ತದಾನ ಶಿಬಿರದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿದರು.
ಬೆಳಗಾವಿ;ಈ ಬಾರಿ ಶಿಕ್ಷಕರ ದಿನವನ್ನು ವಿಶಿಷ್ಟ ವಾಗಿ ಆಚರಿಸಲು ಮುಂದಾಗಿರುವ ಜಿಪಂ ಶಿಕ್ಷಕರಿಗೆ ಹೂವು, ಶುಭಾಶಯಗಳ ಬದಲು ಜೀವ ಉಳಿಸುವ ರಕ್ತದಾನ ಮಾಡುವ ಮೂಲಕ ಗೌರವ ಸಲ್ಲಿಸುವ ವಿನೂತನ ಕಾರ್ಯಕ್ರಮ ಸೆ.3ರಂದು 14 ತಾಲೂಕುಗಳಲ್ಲಿ ಏಕಕಾಲಕ್ಕೆ ಶಿಬಿರ ಹಮ್ಮಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಬಿರದ ಪೋಸ್ಟರ ಹಾಗೂ ಪ್ರಚಾರ ಸಾಮಗ್ರಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕು ಕೇಂದ್ರಗಳಲ್ಲಿ ಒಂದೇ ದಿನ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಶಿಕ್ಷಕರು, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಲಿದ್ದಾರೆ.
ದೇಶದಲ್ಲಿಯೇ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ.ರಕ್ತದಾನ ಜೀವ ಉಳಿಸುವ ಮಹತ್ವದ ಕಾರ್ಯವಾಗಿದ್ದು, ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ಶಿಬಿರದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಜಿಪಂ ಸಿಇಒ ರಾಹುಲ ಶಿಂಧೆ ಮಾತನಾಡಿ,ಜಿಲ್ಲಾ ಪಂಚಾಯಿತಿ ಹಾಗೂ ಅಧೀನ ಇಲಾಖೆಗಳ ಸಹಯೋಗದಲ್ಲಿ ಶಿಬಿರದ ಸಿದ್ಧತೆ ನಡೆಯುತ್ತಿದೆ. ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ರಕ್ತದಾನಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಶಿಕ್ಷಕರು, ಸರ್ಕಾರಿ ನೌಕರರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಜಿಲ್ಲಾದ್ಯಂತ 10 ಸಾವಿರಕ್ಕೂ ಅಧಿಕ ಮಂದಿ ರಕ್ತದಾನ ಮಾಡುವ ನಿರೀಕ್ಷೆ ಹೊಂದಲಾಗಿದೆ.ಶಿಕ್ಷಕರ ದಿನಾಚರಣೆಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಸಮಾಜಕ್ಕೆ ಉಪಯುಕ್ತವಾದ ಕಾರ್ಯದ ಮೂಲಕ ಅರ್ಥಪೂರ್ಣವಾಗಿಸುವ ಪ್ರಯತ್ನ ಇದಾಗಿದೆ.
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಎಸ್‌ಪಿ ಕೆ.ರಾಮರಾಜನ್ ಇತರರಿದ್ದರು.