ಚಳಿಗಾಲ ಅಧಿವೇಶನಕ್ಕೆ ಸಜ್ಜುಗೊಂಡಿರುವ ಸುವರ್ಣ ವಿಧಾನಸೌಧ
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕಿ, ಪಕ್ಷದ ನಾಯಕತ್ವಕ್ಕಾಗಿ ಗೊಂದಲ ಸೃಷ್ಟಿಯಾಗಿರುವ ಬೆನ್ನಲ್ಲೆ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಎಲ್ಲ ವರ್ಗದ ಜನರನ್ನು ತನ್ನತ್ತ ಸೆಳೆದುಕೊಳ್ಳಲು ಬಿಜೆಪಿ ರಾಜ್ಯ ನಾಯಕರು ಗ್ರಾಮ ವಾಸ್ತವ್ಯಕ್ಕೆ ಸಜ್ಜಾಗಿದ್ದಾರೆ!
ಹೌದು. ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿ.8ರಿಂದ ಹತ್ತು ದಿನಗಳ ನಡೆಯಲಿರುವ ವಿಧಾನಮಂಡಲ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಪಟ್ಟಣ ಮತ್ತು ಹಳ್ಳಿಗಳಲ್ಲಿ ಜನ ಸಾಮಾನ್ಯರು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಲು, ಸರ್ಕಾರದ ಚಳಿ ಬಿಡಿಸಲು ಪ್ರತಿಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಶಾಸಕರು ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದು, ಇದಕ್ಕಾಗಿ ಕಾಯತಂತ್ರಗಳನ್ನು ಹೆಣೆಯುತ್ತಿದ್ದಾರೆ.
ಈಗಾಗಲೇ ಮೂಡಲಗಿ ತಾಲೂಕಿನ ಗುಲ್ಲಾಪುರ ಕ್ರಾಸ್‌ನಲ್ಲಿ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ ಅವರೊಂದಿಗೆ ಬಿ.ವೈ.ವಿಜಯೇಂದ್ರ ವಾಸ್ತವ್ಯಕ್ಕೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ, ರೈತ ಸಂಘಟನೆಗಳು ಸೇರಿ ಬೆಳೆಗಾರರು ಬಿಜೆಪಿ ನಾಯಕರ ನಡೆಗೆ ಬೆಂಬಲ ಸೂಚಿಸಿದ್ದರು. ಈ ಹಿನ್ನೆಲೆ ಅಧಿವೇಶನದಲ್ಲಿ ಸಂದರ್ಭದಲ್ಲಿ ಕನಿಷ್ಠ 5 ದಿನಗಳ ಗ್ರಾಮ ವಾಸ್ತವ್ಯ ಮಾಡುವ ಕುರಿತು ಪಕ್ಷದ ವರಿಷ್ಠರ ಜತೆಗೆ ಚರ್ಚಿಸಲಾಗಿದೆ. ಆದರೆ, ಅಂತಿಮವಾಗಿಲ್ಲ.
ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಳಗಾವಿ ದಕ್ಷಿಣ, ಗೋಕಾಕ, ರಾಯಬಾಗ, ಅರಭಾಂವಿ, ನಿಪ್ಪಾಣಿ, ಹುಕ್ಕೇರಿ ಹಾಗೂ ಖಾನಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಬೆಳಗಾವಿ ಉತ್ತರ, ಗ್ರಾಮೀಣ, ಕಿತ್ತೂರು, ಸವದತ್ತಿ, ಬೈಲಹೊಂಗಲ, ರಾಮದುರ್ಗ, ಯಮಕನಮರಡಿ, ಅಥಣಿ, ಕಾಗವಾಡ, ಕುಡಚಿ, ಚಿಕ್ಕೋಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇವುಗಳ ಪೈಕಿ 3 ಕಾಂಗ್ರೆಸ್ ಶಾಸಕರು ಹಾಗೂ 2 ಬಿಜೆಪಿ ಶಾಸಕ ಕ್ಷೇತ್ರದಲ್ಲಿ ಗ್ರಾಮಸ್ತವ ಮಾಡುವ ಕುರಿತು ಯೋಜನೆ ರೂಪಿಸಿದ್ದೇವೆ. ಆದರೆ, ವಿರೋಧ ಪಕ್ಷದ ನಾಯಕ, ಪಕ್ಷದ ರಾಜ್ಯಾಧ್ಯಕ್ಷರ ಅಭಿಪ್ರಾಯದ ಮೇಲೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಿಂತಿದೆ ಎಂದು ಬಿಜೆಪಿ ಮಾಜಿ ಶಾಸಕರು, ಮುಖಂಡರು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಚಳಿಬಿಡಿಸಲು ತಂತ್ರ
ಈ ಬಾರಿ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ಚಳಿ ಬಿಡಿಸಲುಸಜ್ಜಾಗಿರುವ ಪ್ರತಿಪಕ್ಷವಾದ ಬಿಜೆಪಿ, ಜೆಡಿಎಸ್ ನಾಯಕರು ಹತ್ತು ದಿನ ಅಧಿವೇಶನದಲ್ಲಿ ಐಷಾರಾಮಿ ಹೋಟೆಲ್ ವಾಸ್ತವ್ಯ ಮಾಡುವ ಬದಲು ಬಡವರೊಂದಿಗೆ ವಾಸ್ತವ್ಯ ಮಾಡಿ ಹಳ್ಳಿಗಳಿಂದ ನೇರವಾಗಿ ಸುವರ್ಣ ವಿಧಾನಸೌಧಕ್ಕೆ ಬರುವ ಯೋಜನೆ ಹಾಕಿಕೊಂಡಿದೆ. ಅಲ್ಲದೆ, ಅಧಿವೇಶನದ ಮೊದಲ ದಿನ ಪಾದಯಾತ್ರೆ ನಡೆಸಿ ಜನರ ಮನಸೆಳೆಯಲು ಬಿಜೆಪಿ ವಿನೂತನ ತಂತ್ರರೂಪಿಸಿದೆ. ಡಿ.5ರಂದು ನಡೆಯುವ ಬಿಜೆಪಿ ವರಿಷ್ಠರ, ಶಾಸಕಾಂಗದ ಸಭೆಯಲ್ಲಿ ಅಧಿವೇಶನದಲ್ಲಿ ಸರ್ಕಾರವನ್ನು ಎದುರಿಸುವುದು, ಹೋರಾಟ ಕುರಿತು ಅಂತಿಮ ನಿರ್ಧಾರ ಹೊರಬರಲಿದೆ ಎಂದು ಬಿಜೆಪಿ ನಾಯಕರು ವಿವರಿಸಿದ್ದಾರೆ.
ಈ ಬಾರಿ ಸುವರ್ಣ ವಿಧಾನಸೌಧದಲ್ಲಿ ಹತ್ತು ದಿನಗಳ ಕಾಲ ನಡೆಯಲಿರುವ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರೂಪಿಸುವ ಕುರಿತು ಚರ್ಚಿಸಲು ನ.29ರಂದು ವಿಶೇಷ ಸಭೆಯ ಕರೆಯಲಾಗಿದೆ. ಹಳ್ಳಿಗಳಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವುದರ ಜತೆಗೆ ಬಿಸಿ ಮುಟ್ಟಿಸುವ ಕೆಲಸ ಮಾಡಲಿದ್ದೇವೆ.
- ಸುಭಾಷ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ