ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿ ಬೆಳಗಾವಿಯಲ್ಲಿ ಗುರುವಾರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟಿಸಿದರು. 
ಬೆಳಗಾವಿ

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

ಬೆಳಗಾವಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡುವ ಸಮಯದಲ್ಲಿ ಅಸಂವಿಧಾನಿಕ ಹಾಗೂ ಆಕ್ಷೇಪಾರ್ಹ ಪದ ಬಳಸಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಗುರುವಾರ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಅರ್ಧಗಂಟೆಗೂ ಹೆಚ್ಚು ಕಾಲ ವೃತ್ತದಲ್ಲಿ ಕುಳಿತು ಸಂಚಾರ ತಡೆದು ಪ್ರತಿಭಟಿಸಿ ಖರ್ಗೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಹುದ್ದೆಗೆ ಗೌರವವನ್ನೂ ಕೊಡದ ಎಐಸಿಸಿ ಅಧ್ಯಕ್ಷರು ಆರೋಪ ಮಾಡುವಾಗ ಅಸಂವಿಧಾನಿಕ ಪದ ಬಳಕೆ ಮಾಡಿದ್ದು, ಇದು ಆಕ್ಷೇಪಾರ್ಹವಾಗಿದೆ. ಹೀಗಾಗಿ, ಈ ರೀತಿಯ ಮನಸ್ಥಿತಿಯನ್ನು ಖಂಡಿಸುತ್ತೇವೆ. ಇಂತಹ ಗಂಭೀರ ಆರೋಪ ಮಾಡಿರುವ ವ್ಯಕ್ತಿ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿರಲು ಅರ್ಹರಲ್ಲ. ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮುರುೇಂದ್ರಗೌಡ ಪಾಟೀಲ ಮಾತನಾಡಿ, ದೇಶದ ಪ್ರಧಾನಿಯವರಿಗೆ ಭಯೋತ್ಪಾದಕರೆಂಬ ಪದ ಬಳಕೆ ಮಾಡಿರುವುದು ಸಹಿಸಲಾಧ್ಯವಾದ ಆರೋಪ. ಈ ರೀತಿಯ ಅಸಂವಿಧಾನಿಕ ಪದ ಬಳಸುವ ಮೂಲಕ ಕಾಂಗ್ರೆಸ್ ಸಂಸ್ಕೃತಿ ಎಂತಹುದು ಎಂಬುದನ್ನು ಖರ್ಗೆ ತೊರಿಸಿ ಕೊಟ್ಟಿದ್ದಾರೆ. ಅವರಿಗೆ ನೈತಿಕತೆ ಇದ್ದಲ್ಲಿ ಈ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಯುವ ಮೋರ್ಚಾ ಗ್ರಾಮಾಂತರ ಜಿಲ್ಲಾಧ್ಯಕ್ಷ ಮಹಾಂತೇಶ ಚಿನ್ನಪ್ಪಗೌಡ್ರ, ಮಹಾನಗರ ಜಿಲ್ಲಾಧ್ಯಕ್ಷ ಮಹಾದೇವ ಧರೆನ್ನವರ, ಆನಂದ ಅತ್ತುಗೋಳ, ಗುರು ಹಿರೇಮಠ, ಪಂಡಿತ ಓಗಲೆ, ಶಿವಾನಂದ ಕಮತೆ, ಕೃಷ್ಣ ಪಾಟೀಲ, ಈರಣ್ಣ ಅಂಬಲಿ, ರಾಜಶೇಖರ ಡೋಣಿ, ಪ್ರಸಾದ ದೇವರಮನಿ, ಶಿಲ್ಪಾ ಕೆಕರೆ ಇತರರಿದ್ದರು.