ಬೆಳಗಾವಿ ನಗರದ ಬಿಜೆಪಿ ಕಚೇರಿಯಲ್ಲಿ ಈಚೆಗೆ ನಡೆದ ಸಂಘಟನಾತ್ಮಕ ಸಭೆಯಲ್ಲಿ ಭೈರತಿ ಬಸವರಾಜ ಮಾತನಾಡಿದರು. ಅನಿಲ ಬೆನಕೆ, ಅಭಯ ಪಾಟೀಲ ಇತರರಿದ್ದರು.
ಬೆಳಗಾವಿ:ಉತ್ತರ ಕರ್ನಾಟಕ ಭಾಗದಲ್ಲಿಯೇ ಬಿಜೆಪಿಗೆ ಭದ್ರ ಬುನಾದಿ ಹಾಕಿರುವ ಬೆಳಗಾವಿ ದಕ್ಷಿಣ, ಉತ್ತರ ಹಾಗೂ ಗ್ರಾಮೀಣ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಬಲಿಷ್ಠಗೊಳಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಭೈರತಿ ಬಸವರಾಜ ಹೇಳಿದರು.
ಬಿಜೆಪಿ ನಗರ ಘಟಕದ ಕಚೇರಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರಮುಖರು, ಪದಾಧಿಕಾರಿಗಳ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇಲ್ಲ ಎಂಬ ಕಾರಣಕ್ಕೆ ಸಂಘಟನೆ ಕೈಬಿಡಬೇಡಿ. ಮುಂಬರುವ ಚುನಾವಣೆ ಎದುರಿಸಿ ಗೆಲುವು ಸಾಧಿಸಲು ಈಗಿನಿಂದಲೇ ನಾವೆಲ್ಲಾ ಒಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದರು.
ಕೇಂದ್ರ ಸರ್ಕಾರ ಜನಪ್ರತಿಯ ಯೋಜನೆಗಳು, ಅಭಿವೃದ್ಧಿ ಕೆಲಸಗಳ ಕುರಿತು ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಧಿಕಾರದ ಅವಧಿಯಲ್ಲಿ ಮಾಡಿರುವ ಕೆಲಸಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಿ. ಜತೆಗೆ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತ ಕುರಿತು ಹೋರಾಟಗಳನ್ನು ನಡೆಸಬೇಕು ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ ಮಾತನಾಡಿ, ಬಲಿಷ್ಠ ಕಾರ್ಯಕರ್ತರ ಪಡೆಯನ್ನು ಹೊಂದಿರುವ ಬಿಜೆಪಿಯು ಮುಂಬರುವ ಎಲ್ಲ ರೀತಿಯ ಚುನಾವಣೆಗಳಲ್ಲಿ ಗೆಲುವು ಸಾಧಿಸಲಿದೆ. ಕಾರ್ಯಕರ್ತರು, ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಶಾಸಕ ಅಭಯ ಪಾಟೀಲ, ಮಹಾಪೌರರಾದ ಪ್ರೀತಿ ಕಾಮಕರ ಉಪ ಮಹಾಪೌರರಾದ ಹನುಮಂತ ಕೋಂಗಾಲಿ, ವಿಭಾಗ ಪ್ರಭಾರಿಗಳಾದ ಸಂಜಯ ಪಾಟೀಲ, ಡಾ. ರವಿ ಪಾಟೀಲ, ಉಜ್ವಲಾ ಬಡವನಾಚ, ರಮೇಶ ದೇಶಪಾಂಡೆ, ರಾಜೇಂದ್ರ ಹರಕುಣಿ, ಜೀಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಈರಯ್ಯ ಖೋತ, ರಾಜಶೇಖರ ದೋಣಿ, ಗಣೇಶ ದೇಸಾಯ ಇತರರಿದ್ದರು.