ಗೋಕಾಕ ನಗರದಲ್ಲಿ ಜರುಗಿದ ಪಂ. ದೀನ ದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಎರಡನೇ ದಿನ ಕಾರ್ಯಕ್ರಮವನ್ನು ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು. ಸಂಜಯ ಪಾಟೀಲ, ಸುಭಾಷ ಪಾಟೀಲ, ಗೋವಿಂದ ಕೊಪ್ಪದ ಇತರರಿದ್ದರು. 
ಬೆಳಗಾವಿ

2028ಕ್ಕೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ

 ಗೋಕಾಕ:ಕೇಂದ್ರ ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸ, ಜನಪ್ರೀಯ ಯೋಜನೆಯ ಕುರಿತು ಜನಸಾಮಾನ್ಯರಿಗೆ ತಿಳಿಸುವುದರ ಜತೆಗೆ ಪಕ್ಷ ಸಂಘಟನೆಯಲ್ಲಿ  ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು. 2028ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಈಚೆಗೆ ಅರಭಾವಿ ಬಿಜೆಪಿ ಮಂಡಲವು ಹಮ್ಮಿಕೊಂಡ ಪಂ. ದೀನ ದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ಯಾಂ ಪ್ರಸಾದ ಮುಖರ್ಜಿ ಮತ್ತು ದೀನ ದಯಾಳ ಉಪಾಧ್ಯಾಯ ಹುಟ್ಟು ಹಾಕಿದ್ದ ಜನಸಂಘವು ಮುಂದೆ ಭಾರತೀಯ ಜನತಾ ಪಾರ್ಟಿಯಾಗಿ ಬದಲಾಯಿತು. ಭಾರತರತ್ನ ಅಟಟ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಡಾ. ಮುರಳಿ ಮನೋಹರ ಜೋಷಿ ಹೋರಾಟ, ಪರಿಶ್ರಮದಿಂದ ಪಕ್ಷ ಬಲಿಷ್ಠವಾಗಿ ಬೆಳೆದು ನಿಂತಿದೆ ಎಂದರು.
ದೇಶದಲ್ಲಿ ಕೇವಲ ಇಬ್ಬರು ಸಂಸತ ಸದಸ್ಯರನ್ನು ಹೊಂದಿದ್ದ ಪಕ್ಷ  ಕಾಲ ಕ್ರಮೇಣ ಇಡೀ ದೇಶದ ಮೂಲೆ- ಮೂಲೆಗಳಲ್ಲಿ ಅಧಿಕಾರಕ್ಕೆ ಬಂದಿದೆ. ತದನಂತರ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸಂಘಟನಾತ್ಮಕ ಹೋರಾಟ, ತಳ ಮಟ್ಟದಲ್ಲಿ ಪಕ್ಷ ಸಂಘಟನೆದಿಂದಾಗಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ ದೇಶವನ್ನು ಅಭಿವೃದ್ಧಿಯತ್ತ ಮುನ್ನೆಡಸುತ್ತಿದ್ದಾರೆ.
ದೇಶದಲ್ಲಿ  ಕೋಟ್ಯಾಂತರ ಕಾರ್ಯಕರ್ತರ ತ್ಯಾಗ, ಶ್ರಮದ ಫಲವಾಗಿ ಅಧಿಕಾರಕ್ಕೆ ಬಂದಿರುವ ನಮ್ಮ ಪಕ್ಷವು ’ಸಬ್ ಕಾ ಸಾಥ್, ಸಬ್ ಕಾ ವಿಕಾಸ’ ಎಂಬ ಧ್ಯೇಯದೊಂದಿಗೆ ಎಲ್ಲ ವರ್ಗಗಳ ಹಿತಕ್ಕಾಗಿ ಕೆಲಸ ಮಾಡುತ್ತಿದೆ. ಪ್ರಧಾನಿ ದೂರದೃಷ್ಟಿಯಿಂದ ನಮ್ಮ ಭಾರತವನ್ನು ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನಕ್ಕೇರಿದೆ.ಕೇಂದ್ರ ಸರ್ಕಾರದ ಅವಧಿಯಲ್ಲಿ ನಡೆದಿರುವ ಅನೇಕ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ಕೆಲಸ ಕಾರ್ಯಕರ್ತರದ್ದಾಗಿದೆ ಎಂದು ತಿಳಿಸಿದರು.
ಮುಂಬರುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಗೆಲುವು ಸಾಧಿಸಬೇಕು. ಆ ನಿಟ್ಟಿನಲ್ಲಿ ಬೂತ ಮಟ್ಟದಲ್ಲಿಯೇ ಪಕ್ಷ ಸಂಘಟಿಸಿಬೇಕು.ಬಿಜೆಪಿ ಜತೆ ಜೆಡಿಎಸ್ ಪಕ್ಷವು ಮೈತ್ರಿಗೊಂಡಿದ್ದರಿಂದ ನಮ್ಮ ಪಕ್ಷಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗಲಿದೆ ಎಂದರು.
 ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸುಭಾಷ ಪಾಟೀಲ, ರಾಷ್ಟ್ರೀಯ ಓಬಿಸಿ ಮೋರ್ಚಾ ಕಾರ್ಯಕಾರಿಣಿ  ಸದಸ್ಯ ಲಕ್ಷ್ಮಣ ತಪಸಿ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ , ಅರಭಾವಿ ಬಿಎಲ್ಎ- 1 ಪ್ರಭಾರಿ ಗೋವಿಂದ ಕೊಪ್ಪದ, ನಿತೀನ್ ಚೌಗುಲೆ, ವೀರಭದ್ರಯ್ಯ ಪೂಜೇರಿ, ಪರಸಪ್ಪ ಬಬಲಿ, ಪ್ರಮೋದ ನುಗ್ಗಾನಟ್ಟಿ  ಇತರರಿದ್ದರು.