ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಪ್ರಮಾಣ ಪತ್ರಕ್ಕಾಗಿ ಜನರು ಸರತಿ ಸಾಲಿನಲ್ಲಿ ನಿಂತಿರುವುದು.
ರಾಜ್ಯದಲ್ಲಿ ಶ್ರೀಮಂತ ಖ್ಯಾತಿಯ ಮಾಹಾನಗರ ಪಾಲಿಕೆಯಲ್ಲಿ ಸಿಬ್ಬಂದಿ ನಿರ್ಲಕ್ಷೃ, ಸರ್ವರ್ ಸಮಸ್ಯೆ ಇತರೆ ಕಾರಣಗಳಿಂದಾಗಿ ಜನನ, ಮರಣ ಪ್ರಮಾಣ ಪತ್ರ ಪಡೆದುಕೊಳ್ಳಲು ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿ, ಸಿಬ್ಬಂದಿ ವರ್ಗದ ನಿರ್ಲಕ್ಷೃದಿಂದಾಗಿ ಪ್ರಮಾಣ ಪತ್ರ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ತಿದ್ದುಪಡಿ, ಹೊಸದಾಗಿ ಪ್ರಮಾಣ ಪತ್ರ ನಿತ್ಯ ನೂರಾರು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಆದರೆ, ಅರ್ಜಿ ಸಲ್ಲಿಸಿ ವಾರ ಕಳೆದರು ಪ್ರಮಾಣ ಪತ್ರ ಕೈಸೇರುತ್ತಿಲ್ಲ. ಸರ್ವರ್ ಸಮಸ್ಯೆ ಸೇರಿ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ನಾಳೆ ಬನ್ನಿ ಎನ್ನುತ್ತಿದ್ದಾರೆ. ಹೀಗಾಗಿ ನಿತ್ಯ ಕಚೇರಿಗೆ ಅಲೆದಾಡಬೇಕಾಗಿದೆ.
ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಜನನ ಹೊಂದಿರುವ ಮಕ್ಕಳ ಪ್ರಮಾಣ ಪತ್ರ ಪಡೆಯುವುದು ದೊಡ್ಡ ಸರ್ಕಸ್ ಮಾಡಬೇಕಾಗಿದೆ. ಆಸ್ಪತ್ರೆಯವರು ಸಮಯಕ್ಕೆ ಸರಿಯಾಗಿ ಮಾಹಿತಿ ಸಲ್ಲಿಸುತ್ತಿಲ್ಲ. ಕೆಲವೊಮ್ಮ ತಪ್ಪು ಮಾಹಿತಿ ನೀಡಿದ್ದರಿಂದ ತಿದ್ದುಪಡಿಗಾಗಿ ಆಸ್ಪತ್ರೆ, ಪಾಲಿಕೆ ಕಚೇರಿಗೆ ಓಡಾಡಬೇಕು. ಯಾರೊಬ್ಬರು ಸರಿಯಾಗಿ ಸ್ಪಂದಿಸುತ್ತಿಲ್ಲ. ಕುಟುಂಬ ಸದಸ್ಯರ ಆಧಾರದ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿ ಹೀಗೆ ವಿವಿಧ ಕಾರಣಗಳಿಂದಾಗಿ ಪ್ರಮಾಣ ಪತ್ರ ಪಡೆಯಲು ತಿಂಗಳು ಸಮಯ ತೆಗೆದುಕೊಳ್ಳುತ್ತಿದೆ. ಆನ್‌ಲೈನ್ ಸೌಲಭ್ಯ ಕಲ್ಪಿಸಿದರು ಸಮಸ್ಯೆ ಇತ್ಯರ್ಥ ಪಡಿಸುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಸರ್ಕಾರಿ ರಜೆ ಹಿನ್ನೆಲೆ ಮಂಗಳವಾರ ಏಕಕಾಲಕ್ಕೆ ನೂರಾರು ಜನರು ಮಹಾನಗರ ಪಾಲಿಕೆಯ ಕಚೇರಿಗೆ ಆಗಮನಿಸಿ ಜನನ ಮತ್ತು ಮೃತಪಟ್ಟವರ ಮರಣ ಪ್ರಮಾಣ ಪತ್ರ ಪಡೆದುಕೊಂಡರು.ಆದರೆ, ಕೆಲವೊಮ್ಮ ಸರ್ವರ್ ಸಮಸ್ಯೆ, ಹೆಸರು ತಿದ್ದುಪಡಿ ಸಮಸ್ಯೆದಿಂದಾಗಿ ಕೆಲ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬವಾಗಿದೆ. ಜನರು ಅರ್ಜಿ ಸಲ್ಲಿಸುವ ವೇಳೆ ಸರಿಯಾದ ದಾಖಲೆ ಸಲ್ಲಿಕೆ ಮಾಡದಿರುವ ವಿಳಂಬವಾಗುತ್ತಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಜನನ, ಮರಣ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬವಾಗುತ್ತಿರುವ ಕುರಿತು ಗಮನಕ್ಕೆ ಬಂದಿಲ್ಲ. ಈ ಕುರಿತು ಆರೋಗ್ಯ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತೇನೆ.
-ಕಾರ್ತಿಕ್.ಎಂ., ಪಾಲಿಕೆ ಆಯುಕ್ತ