ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಕೇಂದ್ರ ಸರ್ಕಾರದ ವಿಕಸಿತ ಭಾರತ- ರೋಜಗಾರ ಮತ್ತು ಅಜೀವಿಕಾ ಮಿಷನ್ (ವಿಬಿ-ಜಿರಾಮ್‌ಜಿ) ಹೊಸ ಯೋಜನೆ ಅಡಿಯಲ್ಲಿ ಕೂಲಿಕಾರರ ಇ-ಕೆವೈಸಿಯಲ್ಲಿ ಶೇ.99.44ರಷ್ಟು ಮಾಡಿಸುವ ಮೂಲಕ ಬೆಳಗಾವಿ ಜಿಪಂ ಸಾಧನೆ ಮಾಡಿದೆ.
ಜು.1ರಿಂದಲೇ ವಿಬಿ-ಜಿರಾಮ್‌ಜಿ ಜಾರಿಗೆ ಬಂದಿರುವ ಹಿನ್ನೆಲೆ ಪ್ರತಿ ದಿನಕ್ಕೆ 370 ರೂ.ದಿಂದ 382 ರೂ. ಹೆಚ್ಚಳವಾಗಿದೆ. ಅಲ್ಲದೆ,ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಬದಲಾಗಿ 125 ದಿನಗಳ ಉದ್ಯೋಗ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ವಲಸೆ ಹೋಗುವ ಬದಲು ಊರಿನಲ್ಲಿ ವಿಬಿ ಜಿರಾಮ್‌ಜಿ ಅಡಿಯಲ್ಲಿ ಉದ್ಯೋಗ ಪಡೆದುಕೊಂಡು ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು.
ಸದ್ಯ ಜಿಲ್ಲೆಯಲ್ಲಿ ಒಟ್ಟು 7,72,030 ನೋಂದಾಯಿತ ಕೂಲಿ ಕಾರ್ಮಿಕರಿದ್ದು, ಇವರಲ್ಲಿ 6,93,124 ಮಂದಿ ಈಗಾಗಲೇ ಇ-ಕೆವೈಸಿ ಪೂರ್ಣಗೊಳಿಸಲಾಗಿದೆ. ಬಾಕಿ ಉಳಿದಿರುವ ಕಾರ್ಮಿಕರ ಪೈಕಿ ಕೆಲವರು ವಲಸೆ ಹೋಗಿರುವುದು, ತಾಂತ್ರಿಕ ಸಮಸ್ಯೆ ಸೇರಿ ಇತರೆ ಕಾರಣಗಳಿಂದ ಇ-ಕೆವೈಸಿ ಆಗಿಲ್ಲ. ಈ ಕುರಿತು ವಿಶೇಷ ಅಭಿಯಾನ ನಡೆಸಿ ಎಲ್ಲ ಕಾರ್ಮಿಕರ ಇ-ಕೆವೈಸಿ ಮಾಡಿಸಲು ಕ್ರಮ ವಹಿಸಲಾಗಿದೆ.
ವಿಬಿ-ಜಿರಾಮ್‌ಜಿಯಲ್ಲಿ ಪಾರದರ್ಶಕತೆ ಕಾಪಾಡಲು ಮತ್ತು ಅರ್ಹ ಕಾರ್ಮಿಕರಿಗೆ ನೂರು ದಿನಗಳ ಉದ್ಯೋಗ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಇ-ಕೆವೈಸಿ ಪ್ರಮುಖ ಪಾತ್ರ ವಹಿಸಲಿದೆ.ಅಲ್ಲದೆ, ಕೂಲಿಕಾರರ ಎನ್‌ಎಂಎಂಎಸ್ ಹಾಜರಾತಿಯಲ್ಲಿ ಪಾರದರ್ಶಕತೆ ಅನುಕೂಲವಾಗಲಿದೆ. ಎಲ್ಲ ಕಾರ್ಮಿಕರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ ಶಿಂಧೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಂತರಿಕ ನೇಮಕಾತಿ ಆಕ್ಷೇಪಣೆಗೆ ಆಹ್ವಾನ
ಜಿಲ್ಲೆಯಾದ್ಯಂತ ಗ್ರಾಪಂಗಳಲ್ಲಿ ಕರವಸೂಲಿಗಾರ, ಕ್ಲರ್ಕ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರಗಳ ವೃಂದದಿಂದ ಗ್ರೇಡ-2 ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಸೇವೆಯೊಳಗೆ ಆಂತರಿಕ ನೇಮಕಾತಿ ಮಾಡಲು ಜೂನ್.30ರಂದು ಜರುಗಿದ ಡಿಪಿಸಿ ಸಮಿತಿ ಸಭೆಯಲ್ಲಿ ಪರಿಷ್ಕೃತ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಸಂಭವನೀಯ ಪಟ್ಟಿ ಪ್ರಕಟಿಸಲಾಗಿದೆ. ಪರಿಷ್ಕೃತ ತಾತ್ಕಾಲಿಕ ಸಂಭವನೀಯ ಪಟ್ಟಿಗೆ ಆಕ್ಷೇಪಣೆಗಳೇನಾದರು ಇದ್ದಲ್ಲಿ ಜು.7ರ ಒಳಗಾಗಿ ಲಿಖಿತವಾಗಿ ಸಂಬಂಧಿಸಿದ ದಾಖಲಾತಿಗಳೊಂದಿಗೆ ಜಿಪಂ ಕಾರ್ಯಾಲಯಕ್ಕೆ ಸಲ್ಲಿಸಬಹುದು ಎಂದು ಸಿಇಒ ರಾಹುಲ ಶಿಂಧೆ ತಿಳಿಸಿದ್ದಾರೆ