ಪಾಲಿಕೆಯ ಆವರಣದಲ್ಲಿ ಮೇಯರ್, ಉಪಮೇಯರ್‌ಗೆ ಮನವಿ ಸಲ್ಲಿಸಿದ ಕನ್ನಡ ಪರ ಸಂಘಟನೆ ಮುಖಂಡರು. 
ಬೆಳಗಾವಿ

ಬೆಳಗಾವಿ ನಮ್ಮದು ನಿರ್ಣಯಕ್ಕೆ ಆಗ್ರಹ

ಬೆಳಗಾವಿ: ಕರ್ನಾಟಕ ಅವಿಭಾಜ್ಯ ಅಂಗ, ಮಹಾಜನ ವರದಿಯೇ ಅಂತಿಮ ಎಂಬ ನಿರ್ಣಯ ಐತಿಹಾಸಿಕ ನಿರ್ಣಯ ಕೈಗೊಳ್ಳಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್‌ಗೆ ಕನ್ನಡ ಪರ ಸಂಘಟನೆ ಮುಖಂಡರು ಮನವಿ ಮೂಲಕ ಒತ್ತಾಯಿಸಿದರು.
ಮಹಾನಗರ ಪಾಲಿಕೆಯ ಆವರಣದಲ್ಲಿ ಗುರುವಾರ ಕನ್ನಡ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮೇಯರ್ ಪ್ರೀತಿ ಕಾಮಕರ್, ಉಪಮೇಯರ್ ಹಣಮಂತ ಕೊಂಗಾಲಿ ಅವರನ್ನು ಸನ್ಮಾನಿಸಿ ಹಲವು ಬೇಡಿಕೆ ಒಳಗೊಂಡಿರುವ ಮನವಿ ಸಲ್ಲಿಸಿದರು.
ಇದೇ ಬೆಳಗಾವಿ ಮಹಾನಗರ ಪಾಲಿಕೆ ಪರಿಷನ್ ಸಭಾಂಗಣದಲ್ಲಿ 2005 ಅಕ್ಟೋಬರ್ 10ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಪಾಲಿಕೆಯ ಮೇಯರ್, ಉಪಮೇಯರ್ ಅವರು ಪರಿಷತ್ ಸಭೆಯಲ್ಲಿ ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಬಹುಮತ ನಿರ್ಣಯ ಕೈಗೊಂಡು ಮಹಾರಾಷ್ಟ್ರ ಸರ್ಕಾರಕ್ಕೆ, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು. ಇದರು ಕರ್ನಾಟಕ ಸರ್ಕಾರದ ಕಾನೂನು ಹೋರಾಟಕ್ಕೆ ಅಡ್ಡಿಯಾಗಿ ಪರಿಣಮಿಸಿದೆ. ಇದಕ್ಕೆ ಪ್ರತಿಯಾಗಿ ಪಾಲಿಕೆಯ ಆಡಳಿತ ಮಂಡಳಿಯು ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ, ಮಹಾಜನ ವರದಿಯೇ ಅಂತಿಮ ಎಂಬ ನಿರ್ಣಯ ಕೈಗೊಳ್ಳುವುದು ಅವಶ್ಯಕವಾಗಿದೆ ಎಂದು ಒತ್ತಾಯಿಸಿದರು.
ಸದ್ಯ ಪಾಲಿಕೆಯ 58 ಸದಸ್ಯರ ಪೈಕಿ 55 ಸದಸ್ಯರು ಕನ್ನಡಿಗರೇ ಸದ್ಯಸರಿದ್ದಾರೆ. ಅಲ್ಲದೆ, ಕನ್ನಡ ಭಾಷಿಕ ಮೇಯರ್, ಉಪಮೇಯರ್ ಆಗಿದ್ದರಿಂದ ಕನ್ನಡ ಪರ ನಿರ್ಣಯ ಕೈಗೊಂಡು ಸರ್ಕಾರಕ್ಕೆ, ಸುಪ್ರೀಂ ಕೋರ್ಟ್‌ಗೆ ಕಳುಹಿಸಬೇಕು. ಈ ವಿಷಯದಲ್ಲಿ ಪಾಲಿಕೆಯು ವಿಳಂಬ ನೀತಿ ಅನುಸರಿಸದೆ ತಕ್ಷಣವೇ ಸಾಮಾನ್ಯ ಸಭೆ ಕರೆದು ಠರಾವು ಪಾಸ್ ಮಾಡಬೇಕು ಎಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿದರು.
ಮೇಯರ್ ಪ್ರೀತಿ ಕಾಮಕರ್, ಉಪಮೇಯರ್ ಹಣಮಂತ ಕೊಂಗಾಲಿ, ಮಹಾದೇವ ತಳವಾರ, ಶ್ರೀನಿವಾಸ ತಾಳೂರಕರ್ ಇತರರಿದ್ದರು.
.................
ಕೋಟ್ಸ್
ಕನ್ನಡ ಪರ ಸಂಘಟನೆ ಸಲ್ಲಿಸಿರುವ ಬೇಡಿಕೆ ಮನವಿ ಕುರಿತು ಪಾಲಿಕೆಯ ಎಲ್ಲ ಸದಸ್ಯರು, ಕಾನೂನು ಸಲಹೆಗಾರರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು.
-ಹಣಮಂತ ಕೊಂಗಾಲಿ, ಉಪಮೇಯರ್, ಪಾಲಿಕೆ
.................
ಕೋಟ್ಸ್
ಮಹಾರಾಷ್ಟ್ರದ ಪರ ನಿರ್ಣಯ ಕೈಗೊಂಡಿದ್ದ ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿಯೇ ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ, ಮಹಾಜನ ವರದಿಯೇ ಅಂತಿಮ ಎಂಬ ನಿರ್ಣಯ ಕೈಗೊಳ್ಳಬೇಕು. ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ, ಬೆಳಗಾವಿ ಹಿತಾಸಕ್ತಿ ಕಾಪಾಡಿಕೊಳ್ಳಲು ಇಂತಹ ನಿರ್ಣಯ ಅವಶ್ಯಕವಾಗಿದೆ. ಇದಕ್ಕೆ ಪಾಲಿಕೆ ಮೇಯರ್, ಉಪಮೇಯರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
- ಅಶೋಕ ಚಂದರಗಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ