ಬೆಳಗಾವಿಯ ನೂತನ ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂರಿಗೆ ಭೂಷಣ ಬೋರಸೆ ಗುರುವಾರ ಅಧಿಕಾರ ವಹಿಸಿಕೊಟ್ಟರು.
ಬೆಳಗಾವಿ : ಬೆಳಗಾವಿ ನನಗೆ ಹೊಸದಲ್ಲ. 2013-14ರಲ್ಲಿ ಪ್ರೊಬೇಷನರಿ(ಪ್ರಶಿಕ್ಷಣಾರ್ಥಿ) ಅವಧಿಯನ್ನು ಇದೇ ನಗರದಲ್ಲಿ ಪೂರ್ಣಗೊಳಸಿದ್ದೇನೆ. ಗಣೇಶೋತ್ಸವ ಸೇರಿದಂತೆ ಎಲ್ಲ ಬಂದೋಬಸ್ತ್‌ಗಳ ಅನುಭವ ನನಗಿದೆ. ಹೀಗಾಗಿ, ಅಧಿಕಾರ ವಹಿಸಿಕೊಂಡ ಹೊಸದರಲ್ಲಿ ಬರುತ್ತಿರುವ ಗಣೇಶೋತ್ಸವವನ್ನು ಸಮರ್ಥವಾಗಿ ನಿಭಾಯಿಸಲಾಗುವುದು ಎಂದು ನೂತನ ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂ ಭರವಸೆ ನೀಡಿದರು.
ಹುಬ್ಬಳ್ಳಿ-ಧಾರವಾಡಕ್ಕೆ ವರ್ಗಾವಣೆಯಾಗಿರುವ ಹಾಲಿ ಆಯುಕ್ತ ಭೂಷಣ ಬೋರಸೆಯವರಿಂದ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ಅಧಿಕಾರ ವಹಿಸಿಕೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣೇಶೋತ್ಸವ ಬಂದೋಬಸ್ತ್‌ಗೆ ಸಂಬಂಧಿಸಿ ಎಲ್ಲ ಠಾಣಾಧಿಕಾರಿಗಳು ಹಾಗೂ ಮಹಾಮಂಡಳಿಗಳವರ ಜತೆಗೆ ಸಭೆ ಮಾಡಿ, ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದನ್ನು ಚರ್ಚಿಸುತ್ತೇನೆ ಎಂದು ತಿಳಿಸಿದರು.
ನಾನು ಪೊಬೇಷನರಿಯಲ್ಲಿದ್ದಾಗ ಜಿಲ್ಲಾ ಪೊಲೀಸ್ ಒಂದೇ ಇತ್ತು. ಈಗ ಬೆಳಗಾವಿ ನಗರ ವ್ಯಾಪ್ತಿ ಕಮೀಷ್ನರೇಟ್ ಆಗಿದೆ. ಇದು ಸೇರಿದಂತೆ ಹತ್ತು ವರ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದನ್ನೆಲ್ಲ ನಮ್ಮ ಪೊಲೀಸ್ ಅಧಿಕಾರಿಗಳ ಜತೆಗೆ ಸಭೆ ಮಾಡಿ ತಿಳಿದುಕೊಂಡು ಮುಂದೆ ಸಾಗುತ್ತೇನೆ. ಈಗಾಗಲೇ ಭೂಷಣ ಬೋರಸೆಯವರು ಸಾಕಷ್ಟು ಸುಧಾರಣೆಗಳನ್ನು ಮಾಡಿದ್ದಾರೆ. ಆ ಮಾರ್ಗದರ್ಶನದಲ್ಲೇ ನಾನು ನಡೆಯುತ್ತೇನೆ. ಸುಗಮ ಸಂಚಾರ ವ್ಯವಸ್ಥೆ ಮತ್ತು ಸೈಬರ್ ಕ್ರೈಮ್ ನಿಯಂತ್ರಣಕ್ಕೆ ಹೆಚ್ಚಿನ ನಿಗಾ ವಹಿಸಲಾಗುವುದು. ರೌಡಿ ಶೀಟರ್‌ಗಳನ್ನು ಹದ್ದುಬಸ್ತಿನಲ್ಲಿಡಲು ಎಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಧಿಕಾರ ಹಸ್ತಾಂತರದ ಬಳಿಕ ಹುಬ್ಬಳ್ಳಿಯತ್ತ ಹೊರಟ ಭೂಷಣ ಬೋರಸೆಯವರನ್ನು ಅಧೀನ ಅಧಿಕಾರಿಗಳು ಅದ್ದೂರಿಯಾಗಿ ಬಿಳ್ಕೋಟ್ಟರು. ಇಲಾಖಾ ಗೌರವ, ಸನ್ಮಾನಗಳ ಬಳಿಕ ಕಚೇರಿಯಿಂದ ನಿರ್ಗಮಿಸುತ್ತಿದ್ದ ಅವರಿಗೆ ವಾಹನ ಏರುವವರೆಗೂ ಪುಷ್ಪವೃಷ್ಟಿಗೈದರು. ತೆರೆದ ವಾಹನದಲ್ಲಿ ವಿರಾಜಿಸಿ ಉಳಿದೆಲ್ಲ ಅಧಿಕಾರಿಗಳು ಹಗ್ಗದಿಂದ ಜೀಪ್ ಎಳೆದು ಘೋಷಣೆ ಕೂಗುತ್ತ ಹೃದಯಸ್ಪರ್ಶಿಯಾಗಿ ಬಿಳ್ಕೋಟ್ಟರು.
ಎಸ್ಪಿ ಕೆ.ರಾಮರಾಜನ, ಡಿಸಿಪಿಗಳಾದ ನಾರಾಯಣ ಬರಮನಿ, ನಿರಂಜನ ರಾಜೆ ಅರಸ ಇತರರಿದ್ದರು.
ಬೆಳಗಾವಿಯಲ್ಲಿ ಹದಿನೈದು ತಿಂಗಳು ಮರೆಯಲಾಗದ ಅನುಭವ ಸಿಕ್ಕಿದೆ. ಈ ನಗರ ಹಾಗೂ ಇಲ್ಲಿನ ಜನರನ್ನು ಎಂದಿಗೂ ಮರೆಯುವುದಿಲ್ಲ. ಒಂದು ತಂಡವಾಗಿ ಕೆಲಸ ಮಾಡುವ ಅಧಿಕಾರಿಗಳು ನನಗೆ ಸಿಕ್ಕಿದ್ದರು. ಜನರು ಸಾಕಷ್ಟು ಪ್ರೋತ್ಸಾಹ ಕೊಟ್ಟಿದ್ದಾರೆ. ಮಾದಕ ವಸ್ತು ಜಾಲವನ್ನು ಒಂದು ಹಂತಕ್ಕೆ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆಯೂ ಸಾಕಷ್ಟು ಕೆಲಸ ಮಾಡಿದ್ದೇವೆ. ಅದು ಹಾಗೆಯೇ ಮುಂದುವರೆಯುತ್ತದೆ. ಇಲ್ಲಿನ ಜನರ ಪ್ರೀತಿ ಸದಾ ಕಾಲ ನನ್ನ ಹೃದಯದಲ್ಲಿರುತ್ತದೆ.