ಬೆಳಗಾವಿ: ರಾಜ್ಯದಲ್ಲಿ ಭೌಗೋಳಿಕವಾಗಿ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ಆಡಳಿತಾತ್ಮಕ, ಜನಸಾಮಾನ್ಯರ ಹಿತದೃಷ್ಟಿಯಿಂದ ವಿಭಜಿಸುವ ಕುರಿತು ತ್ವರಿತ ಕ್ರಮವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಅವರಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮನವಿ ಸಲ್ಲಿಸಿ ಒತ್ತಾಯಿಸಿದರು.
ಬೆಳಗಾವಿ 18 ವಿಧಾನಸಭಾ ಕ್ಷೇತ್ರ, ಸುಮಾರು 48 ಲಕ್ಷ ಜನಸಂಖ್ಯೆ ಹೊಂದಿದೆ. ಆಡಳಿತಾತ್ಮಕ ಅನುಕೂಲಕ್ಕಾಗಿ ಹಾಗೂ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಜಿಲ್ಲಾಡಳಿತ ಕೇಂದ್ರ ಜನರ ಸಮೀಪ ಇರಬೇಕೆಂಬುದು ನಮ್ಮ ಭಾವನೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ವಿಚಾರವಾಗಿ ಸರ್ಕಾರ ಸಕಾರತ್ಮಕಾಗಿ ಸ್ಪಂದಿಸಿದೆ.
ಜಿಲ್ಲಾ ವಿಭಜನೆ ಕುರಿತು ಹಾಲಿ, ಮಾಜಿ ಶಾಸಕರು, ಸಂಸದರು, ಹೋರಾಟಗಾರರು, ಪ್ರಮುಖರ ಸಭೆ ಕರೆದು ಚರ್ಚಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಭರವಸೆ ನೀಡಿದ್ದಾರೆ ಎಂದು ಕವಟಗಿಮಠ ತಿಳಿಸಿದ್ದಾರೆ.