ಶಿರಗುಪ್ಪಿ ಸಿದ್ಧೇಶ್ವರ ಪಿಕೆಪಿಎಸ್ ಸಂಘದಲ್ಲಿ ಬೆಳೆ ಸಾಲ ವಿತರಣೆ ಕಾರ್ಯಕ್ರಮಕ್ಕೆ ಅಣ್ಣಾಸಾಹೇಬ ಜೊಲ್ಲೆ ಚಾಲನೆ ನೀಡಿದರು. ಜಯಕುಮಾರ ಖೋತ, ರಾಜೇಂದ್ರ ಕೋಕಟೆ, ಎಂ.ಪಿ.ಪಾಟೀಲ, ಸಂತೋಷ ಕಾಕಡೆ ಇತರರಿದ್ದರು.
ನಿಪ್ಪಾಣಿ: ರೈತರ ಆರ್ಥಿಕ ಅಭಿವೃದ್ಧಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸದಾ ಬದ್ಧವಾಗಿದೆ. ಸಹಕಾರ ಸಂಘಗಳ ಮೂಲಕ ವಿವಿಧ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ತಾಲೂಕಿನ ಶಿರಗುಪ್ಪಿಯ ಸಿದ್ಧೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವತಿಯಿಂದ ಈಚೆಗೆ ಸದಸ್ಯರಿಗೆ ಬೆಳೆ ಸಾಲ ವಿತರಣೆ ಮಾಡಿ ಮಾತನಾಡಿದ ಅವರು, ಕಳೆದ ಏಳು ತಿಂಗಳಲ್ಲಿ ಜಿಲ್ಲಾ ಬ್ಯಾಂಕ್ ಅಂದಾಜು 3,700 ಕೋಟಿ ರೂ. ರೈತ ಸಾಲ ವಿತರಿಸಿದೆ. ರೈತರಿಗೆ ವಿವಿಧ ಕೃಷಿ ಯೋಜನೆಗಳಡಿ ಅಗತ್ಯ ಸೌಲಭ್ಯ, ಸಹಕಾರ ಸಂಘಗಳ ಮೂಲಕ ಒದಗಿಸಲಾಗುತ್ತಿದೆ. ಬಡ್ಡಿರಹಿತ ಕೃಷಿ ಸಾಲ ಸೇರಿದಂತೆ ವಿವಿಧ ಯೋಜನೆಗಳ ಸದುಪಯೋಗ ಪಡೆದು ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಹಾಲಶುಗರ್ಸ್ ಅಧ್ಯಕ್ಷ ಜಯಕುಮಾರ ಖೋತ ಮಾತನಾಡಿ, ಜಿಲ್ಲಾ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ರೈತರಿಗೆ ಸಾಲ ವಿತರಣೆಗೆ ಆದ್ಯತೆ ನೀಡುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ರಾಜೇಂದ್ರ ಕೋಕಟೆ ಮಾತನಾಡಿದರು. ಶಿರಗುಪ್ಪಿಯ ಬೀರೇಶ್ವರ ಶಾಖೆ ಸಂಚಾಲಕ ವಿನಾಯಕ ತೋರಸ್ಕರ ನಿಧನರಾದ ಹಿನ್ನೆಲೆಯಲ್ಲಿ ವಾರಸುದಾರರಿಗೆ 10 ಲಕ್ಷ ರೂ. ಸಹಾಯಧನ ಹಾಗೂ ಸಂಘದ 46 ರೈತ ಸದಸ್ಯರಿಗೆ ಒಟ್ಟು 35.26 ಲಕ್ಷ ರೂ. ಬೆಳೆ ಸಾಲ ವಿತರಿಸಲಾಯಿತು.
ಹಾಲಶುಗರ್ಸ್ ಮಾಜಿ ಅಧ್ಯಕ್ಷ ಎಂ.ಪಿ.ಪಾಟೀಲ, ಸಂತೋಷ ಕಾಕಡೆ, ಸುನೀಲ ಪಾಟೀಲ, ಜಯವಂತ ಭಾಟಲೆ, ಸಮಿತ ಸಾಸನೆ, ಪ್ರಕಾಶ ಶಿಂಧೆ, ಶ್ರೀಕಾಂತ ಬನ್ನೆ, ರಾಜು ಗುಂದೇಶಾ, ಸಿದ್ದು ನರಾಟೆ, ಪಂಕಜ ದೇಸಾಯಿ, ಸಂಭಾಜಿ ಚೌಹಾಣ, ಧೋಂಡಿರಾಮ ಕಾಕಡೆ, ಕಾಶಿನಾಥ ದೇಸಾಯಿ, ಪಂಡಿತ ದೇಸಾಯಿ, ರಾಜೇಂದ್ರ ಕುಂಬಾರ, ಅಮರ ಚೌಹಾಣ, ಅಶೋಕ ಲಕಡೆ ಇತರರಿದ್ದರು.