ಬೆಳಗಾವಿ ನಗರದ ಧರ್ಮನಾಥ ಭವನದಲ್ಲಿ ಗುರುವಾರ ಬೆಳಗಾವಿ ತಾಲೂಕಿನ ಪಿಕೆಪಿಎಸ್ ಸಂಘಗಳ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮಕ್ಕೆ ಬಾಲಚಂದ್ರ ಜಾರಕಿಹೊಳಿ, ಅಣ್ಣಾಸಾಹೇಬ ಜೊಲ್ಲೆ ಚಾಲನೆ ನೀಡಿದರು. ಚನ್ನರಾಜ ಹಟ್ಟಿಹೊಳಿ, ರಾಹುಲ ಜಾರಕಿಹೊಳಿ ಇತರರಿದ್ದರು. 
ಬೆಳಗಾವಿ

ರೈತರ ಅಭಿವೃದ್ಧಿಗೆ ಬಿಡಿಸಿಸಿ ಬ್ಯಾಂಕ್ ಬದ್ಧ

ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರ ಬ್ಯಾಂಕ್‌ನ ಠೇವಣಿ ಪ್ರಮಾಣ ಹೆಚ್ಚುತ್ತಿದ್ದು, ಮುಂದಿನ ಐದು ವರ್ಷದ ಅವಧಿಯಲ್ಲಿ ರೈತರಿಗೆ ಸಾಲಸೌಲಭ್ಯದ ಜತೆಗೆ ವಿವಿಧ ಸವಲತ್ತುಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.
ನಗರದ ಧರ್ಮನಾಥ ಭವನದಲ್ಲಿ ಗುರುವಾರ ಬೆಳಗಾವಿ ತಾಲ್ಲೂಕಿನ ಪಿಕೆಪಿಎಸ್ ಸಂಘಗಳ ವತಿಯಿಂದ ಹಮ್ಮಿಕೊಂಡಿದ್ದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ರಾಹುಲ ಜಾರಕಿಹೊಳಿ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ಬ್ಯಾಂಕಿನ ಹಿಂದಿನ ಅಧ್ಯಕ್ಷರು ಮತ್ತು ಪ್ರಸ್ತುತ ಅಧ್ಯಕ್ಷರಿಗೂ ಅಜ-ಗಜಾಂತರ ವ್ಯತ್ಯಾಸವಿದೆ. ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಬ್ಯಾಂಕಿನ ಪ್ರಗತಿ ಕುರಿತು ವಿವಿಧ ಯೋಜನೆಗಳನ್ನು ಹಾಕಿಕೊಂಡಿದ್ದು, ಅವುಗಳನ್ನು ಈಡೇರಿಸಲಿದ್ದಾರೆ. ಬ್ಯಾಂಕಿನ ಅಭಿವೃದ್ಧಿ ವಿಚಾರದಲ್ಲಿ ಜೊಲ್ಲೆಯವರು ಬ್ಯಾಂಕಿನ ನಿರ್ದೇಶಕರು, ಹಿರಿಯರು, ಪಿಕೆಪಿಎಸ್ ಸದಸ್ಯರು, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.
ರಾಹುಲ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಮಾರ್ಗದರ್ಶನದಲ್ಲಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೀಗ ಡಿಸಿಸಿ ಬ್ಯಾಂಕಿನಿಂದ ಅಪೆಕ್ಸ್ ಬ್ಯಾಂಕಿಗೆ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಇದಕ್ಕೆ ಬೆಳಗಾವಿ ತಾಲ್ಲೂಕಿನ ಎಲ್ಲ ಸಹಕಾರ ಸಂಘಗಳು ಮತ್ತು ರೈತರೇ ಕಾರಣರಾಗಿದ್ದಾರೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಬ್ಯಾಂಕಿನ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಠೇವಣಿ 100 ಕೋಟಿ ರೂ. ಹೆಚ್ಚಳವಾಗಿದೆ. ರೈತರಿಗೆ ನಿಗದಿತ ಸಮಯದಲ್ಲಿ ಸಾಲ ಸೌಲಭ್ಯ ಕಲ್ಪಿಸಲು ಬದ್ಧನಾಗಿದ್ದೇನೆ. ಐದು ವರ್ಷದ ಅವಧಿಯಲ್ಲಿ ಬ್ಯಾಂಕಿನ ಆರ್ಥಿಕ ವಹಿವಾಟು ದುಪ್ಪಟ್ಟ ಆಗಲಿದೆ. ರೈತರ ಸಹಕಾರ ಮುಖ್ಯವಾಗಿದೆ ಎಂದರು.
ನಿರ್ದೇಶಕ ರಾಹುಲ ಜಾರಕಿಹೊಳಿ ಮಾತನಾಡಿ, ಬೆಳಗಾವಿ ತಾಲೂಕಿನಿಂದ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಕಾರಣಿಕರ್ತರಾದ ಸಂಘಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ರೈತರ ಸೇವೆ ಸಲ್ಲಿಸುತ್ತೇನೆ ಎಂದರು.
ವಿಧಾನಪರಿಷತ್ ಸದಸ್ಯ, ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಪಿಕೆಪಿಎಸ್ ಮೂಲಕ ರೈತರಿಗೆ ಆರ್ಥಿಕ ಸಹಾಯ ಕಲ್ಪಿಸಲಾಗುವುದು. ಸಹಕಾರ ಸಂಘಗಳ ಅಭಿವೃದ್ಧಿಗೆ ಬದ್ಧನಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎನ್.ಜಿ.ಕಲಾವಂತ, ಉಪ-ಪ್ರಧಾನ ವ್ಯವಸ್ಥಾಪಕ ಎಸ್.ಬಿ.ಬಾಗೇವಾಡಿ ಇತರರಿದ್ದರು.