ಮಜಲಟ್ಟಿಯಲ್ಲಿ ಹಮ್ಮಿಕೊಂಡಿದ್ದ ಬಸವಪ್ರಭು ಮಹಾರಾಜರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಡಾ.ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು. ಸಂಪಾದನ ಸ್ವಾಮೀಜಿ, ಸಾವಿತ್ರಮ್ಮ ಪಾಟೀಲ ಇತರರಿದ್ದರು. 
ಬೆಳಗಾವಿ

ಭಕ್ತಿ ಮಾರ್ಗ ತೋರಿದ ಬಸವಪ್ರಭು ಮಹಾರಾಜರು

ಚಿಕ್ಕೋಡಿ: ಭಕ್ತಿ ಮಾರ್ಗದಿಂದ ಚಂಚಲ ಮನಸ್ಸು ನಿಯಂತ್ರಣದಲ್ಲಿಡಲು ಸಾಧ್ಯ ಎಂದು ನಿಡಸೋಸಿಯ ಸಿದ್ದಸಂಸ್ಥಾನ ಮಠದ ಡಾ.ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಮಜಲಟ್ಟಿಯ ಸದ್ಗುರು ಕಲ್ಮೇಶ್ವರ ಅಲ್ಲಮಪ್ರಭು ಮಂದಿರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಸವಪ್ರಭು ಮಹಾರಾಜರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವ ಜನ್ಮಕ್ಕೆ ಜ್ಞಾನವೇ ಶ್ರೇಷ್ಠ ರತ್ನವಿದ್ದಂತೆ. ಅಂತಹ ಭಕ್ತಿ, ಜ್ಞಾನ ಮತ್ತು ವೈರಾಗ್ಯವೆಂಬ ತ್ರಿರತ್ನಗಳನ್ನು ಶಿಷ್ಯವೃಂದಕ್ಕೆ ಉಪದೇಶಿಸಿ, ಗುರುಭಕ್ತಿಯ ಸನ್ಮಾರ್ಗ ತೋರಿಸಿಕೊಟ್ಟವರು ಸದ್ಗುರು ಬಸವಪ್ರಭು ಮಹಾರಾಜರು ಎಂದರು.
ಚಿಕ್ಕೋಡಿಯ ಸಂಪಾದನ ಚರಮೂರ್ತಿ ಮಠದ ಸಂಪಾದನ ಸ್ವಾಮೀಜಿ ಮಾತನಾಡಿ, ಸದ್ಗುರು ಬಸವಪ್ರಭು ಮಹಾರಾಜರು ಪರಂಪರೆ ಬೆಳೆಸಿ, ಆಧ್ಯಾತ್ಮದ ಸುಗಂಧ ಪಸರಿಸಿ ಸರಳ ಜೀವನ ನಡೆಸಿದವರು ಎಂದರು.
ಮೌಜೆ ವಡಗಾಂವ ಆದಿನಾಥ ಮಹಾರಾಜರು ಮಾತನಾಡಿದರು. ಮಾತೋಶ್ರೀ ಸಾವಿತ್ರಮ್ಮ ಪಾಟೀಲ, ಶರಣರಾದ ರಾಮ ಶಿರಡೋಣಿ, ಕಲ್ಲಪ್ಪ ಜನವಾಡೆ, ಹನುಮಂತ ಶಾಸ್ತ್ರಿ, ಬಸವಪ್ರಭು ಕುಂಡ್ರುಕು, ಶರತ ಪಾಟೀಲ ಇತರರಿದ್ದರು. ಶಿಂದಿಹಟ್ಟಿಯ ಗೌತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭರತ ಕಲಾಚಂದ್ರ ನಿರೂಪಿಸಿದರು. ಲಗಮಣ್ಣ ತೋರಣಹಳ್ಳಿ ವಂದಿಸಿದರು.