ಬೆಳಗಾವಿಯಲ್ಲಿ ಜರುಗಿದ ಅನುಭಾವ ಗೋಷ್ಠಿಯಲ್ಲಿ ಜಾನಕಿ ಕೆ.ಎಂ. ಮಾತನಾಡಿದರು.
ಬೆಳಗಾವಿ : ಹನ್ನೆರಡನೆಯ ಶತಮಾನ ಸಮಾನತೆಗೆ ಕರೆ ನೀಡಿದ ಕಾಲಘಟ್ಟ. ಅದರ ನೇತೃತ್ವ ವಹಿಸಿದ್ದ ವಿಶ್ವಗುರು ಬಸವಣ್ಣನವರು ಸಮಾಜವನ್ನು ಸಮಾನತೆಯ ತಳಹದಿಯ ಮೇಲೆ ರೂಪಿಸಿದರು. ನಮ್ಮಿಂದ ಇಂದಿಗೂ ಸಾಧ್ಯವಾಗದ್ದು ಬಸವಣ್ಣನವರು ಅಂದು ಸಾಧಿಸಿ ತೋರಿಸಿದ್ದರು. ಅವರ ಕೊಡುಗೆ ಚಿರಸ್ಮರಣೀಯ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಶಿವಬಸವ ನಗರದಲ್ಲಿ ಬಸವ ಜಯಂತಿ ಉತ್ಸವ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದಿಗೂ ಜಾತಿ ಧರ್ಮಗಳ ತಾಕಲಾಟದಲ್ಲಿ ನಾವು ಬೇಯುತ್ತಿದ್ದೇವೆ. ಪರಸ್ಪರರಲ್ಲಿ ವಿಶ್ವಾಸವನ್ನು ಕಳೆದುಕೊಂಡಿದ್ದೇವೆ. ಅನೇಕ ಜಾಡ್ಯಗಳ ಮಧ್ಯೆ ಬದುಕುತ್ತಿರುವ ನಾವುಗಳು ಶರಣರ ವಚನಗಳನ್ನು ಅವಲೋಕಿಸಬೇಕಾಗಿದೆ ಎಂದರು.
ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಬಸವ ಜಯಂತಿ ಉತ್ಸವ ಒಂದು ದಿನದ ಆಚರಣೆಯಾಗದೆ ನಿತ್ಯ ಬದುಕಿನ ಸೂತ್ರವಾಗಬೇಕು. ಅವರ ಜೀವನ ಸಂದೇಶವನ್ನು ನವಸಮಾಜದಲ್ಲಿ ಮೂಡಿಸಿಕೊಳ್ಳುವುದು ಅಗತ್ಯವಾಗಿದೆ. ಮಹಾಸಭೆಯು ಹಲವಾರು ರಚನಾತ್ಮಕವಾದ ಕಾರ್ಯಕ್ರಮ ಸಂಯೋಜಿಸಿ ಯುವಪ್ರತಿಭೆಗಳನ್ನು ರೂಪಿಸುತ್ತಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠ ಗುರುಸಿದ್ಧ ಮಹಾಸ್ವಾಮೀಜಿ ಆಶೀರ್ವಚನದಲ್ಲಿ ಮಾತನಾಡಿ, ಬಸವಣ್ಣನವರು ಯುಗದ ಉತ್ಸಾಹ, ಅವರ ಚಿಂತನೆಗಳು ಮನಕುಲದ ಏಳಿಗೆಯನ್ನು ಪ್ರತಿಬಿಂಬಿಸುತ್ತವೆ. ಅವುಗಳನ್ನು ಅನುಕರಣೆಯಲ್ಲಿ ತರುವಂತಾಗಬೇಕು. ಒತ್ತಡದ ಬದುಕಿಗೆ ದಿವ್ಯಾಔಷಧಿಗಳಾಗಿರುವ ವಚನಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕಿದೆ. ಜೀವನವನ್ನು ಆ ಮೂಲಕ ರೂಪಿಸಿಕೊಳ್ಳಬೇಕು. ಅದುವೇ ಬಸವಣ್ಣನವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದರು.
ಮಹಾಪೌರ ಪ್ರೀತಿ ಕಾಮಕರ ಹಾಗೂ ಉಪಮಹಾಪೌರ ಹನುಮಂತ ಕೊಂಗಾಲಿಯವರನ್ನು ಸತ್ಕರಿಸಲಾಯಿತು. ಬಸವ ಜಯಂತಿ ಅಂಗವಾಗಿ ಜರುಗಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕವನ್ನು ವಿತರಿಸಲಾಯಿತು. ಡಾ.ಎಫ್.ವಿ.ಮಾನ್ವಿ, ವಿ.ಕೆ.ಪಾಟೀಲ, ಗುರುದೇವ ಪಾಟೀಲ, ಮಹಾನಂದಾ ಲೋಕನಣ್ಣವರ, ಬಸವರಾಜ ಮಾದಗೌಡ, ಕಿರಣ ಅಗಡಿ ಇತರರಿದ್ದರು. ವಿದ್ಯಾ ಗೌಡರ ನಿರೂಪಿಸಿದರು. ಬಾಲಚಂದ್ರ ಬಾಗಿ ಸ್ವಾಗತಿಸಿದರು.