ಬೆಟಗೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಅಭಿನವ ಬೂದೀಶ್ವರ ಸ್ವಾಮೀಜಿ, ಬಳಗಾನೂರ ಶಿವಶಾಂತವೀರ ಸ್ವಾಮೀಜಿ ಇತರರಿದ್ದರು.
- ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅಭಿಮತ
- ಪ್ರವಚನ ಮಂಗಲೋತ್ಸವ
ಬೆಟಗೇರಿ: ಬಸವಣ್ಣನವರು ಶತಮಾನದ ಹಿಂದೆ ಕಲ್ಯಾಣದಲ್ಲಿ ಬಿಜ್ಜಳನ ಆಸ್ಥಾನದ ಮಂತ್ರಿಯಾಗಿದ್ದರು. ಬಿಜ್ಜಳ ಮಹಾರಾಜನನ್ನು ಬಿಟ್ಟು, ಮಂತ್ರಿ ಮಹಾತ್ಮ ಬಸವಣ್ಣನನ್ನು ಶತಮಾನ ಉರುಳಿದರೂ ಜನರು ನೆನೆಸುತ್ತಾರೆ. ಏಕೆಂದರೆ ಬಿಜ್ಜಳ ರಾಜ ಮಣ್ಣಿನ ಸಾಮ್ರಾಟನಾಗಿದ್ದರೆ, ಬಸವಣ್ಣ ಹೃದಯ ಸಾಮ್ರಾಟನಾಗಿದ್ದರು ಎಂದು ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಬಸವ ಜಯಂತಿ ಹಾಗೂ ಮಹಾತಪಸ್ವಿ ಜಗದ್ಗುರು ಬೂದೀಶ್ವರ ಮಹಾಶಿವಯೋಗಿಗಳ ಶಿಲಾಮಂಟಪ ಲೋಕಾರ್ಪಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಬಸವಣ್ಣ ಜಗತ್ತಿನ ಜನರ ಹೃದಯ ಸಿಂಹಾಸನದ ಮೇಲೆ ಕುಳಿತಿದ್ದಾರೆ. ಕಾಲ ಕೆಟ್ಟಿಲ್ಲ, ಕಟ್ಟೆಯ ಮೇಲೆ ಕುಳಿತು ಮಾತನಾಡುವವರ ತಲೆ ಕೆಟ್ಟಿದೆ ಎಂದರು.
ಬದುಕಿನ ಕುರಿತು ಒಳ್ಳೆಯ ಚಿಂತನೆ ಅಗತ್ಯ. ಮನುಷ್ಯ ಪುಣ್ಯ ಮತ್ತು ಧರ್ಮದ ಕೆಲಸ ಮಾಡಬೇಕು. ಯಾರ ಹತ್ತಿರವೂ ಧನ, ಕೀರ್ತಿ ಹಾಗೂ ಸಂಪತ್ತು ಉಳಿಯುವುದಿಲ್ಲ. ಜೀವನ ಕ್ಷಣಿಕವಾಗಿದೆ. ಉಸಿರು ತೆಗೆದುಕೊಂಡರೆ ಹುಟ್ಟು, ಉಸಿರು ಬಿಟ್ಟರೆ ಸಾವು. ಯಾರ ಹೃದಯ ಸ್ವಚ್ಛವಿದೆಯೋ ಅವರಲ್ಲಿ ದೇವರು ಇರುತ್ತಾನೆ. ಅನ್ನ, ನೀರು ಹಾಗೂ ಒಳ್ಳೆಯ ಎರಡು ಮಾತು ಭೂಮಿ ಮೇಲಿನ ಮೂರು ರತ್ನಗಳು. ರೂಢಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದರು.
ಹೊಸಳ್ಳಿಯ ಬೂದೀಶ್ವರ ಸ್ವಾಮೀಜಿ, ಬಳಗಾನೂರ ಶಿವಶಾಂತವೀರ ಸ್ವಾಮೀಜಿ ಮಾತನಾಡಿದರು. ಸುಣಧೋಳಿ ಶಿವಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಕಲ್ಲೂರಿನ ಶಂಕರಯ್ಯ ಗುರುಮಠ, ತಬಲಾವಾದಕ ಮಲ್ಲಿಕಾರ್ಜುನ ಕೊಡಗನೂರ ಸಂಗೀತ ಸೇವೆ ನೀಡಿದರು. ಶ್ರೀಗಳನ್ನು ಗ್ರಾಮದ ಭಕ್ತರು ಸತ್ಕರಿಸಿದರು.
ಈಶ್ವರ ಬಳಿಗಾರ, ಶ್ರೀಧರ ದೇಯಣ್ಣವರ, ಬಸವರಾಜ ಪಣದಿ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ದುಂಡಪ್ಪ ಮಾಳೇದ, ಮಲ್ಲಪ್ಪ ಪಣದಿ, ಬಾಳಪ್ಪ ಕನೋಜಿ, ನಿಂಗಪ್ಪ ಕಂಬಿ, ದುಂಡಪ್ಪ ಕಂಬಿ, ಈರಣ್ಣ ಬಳಿಗಾರ, ಈರಪ್ಪ ದೇಯಣ್ಣವರ, ಯಲ್ಲಪ್ಪ ಮೇಳೆಣ್ಣವರ, ಸುರೇಶ ನೀಲಣ್ಣವರ, ಭೀಮನಾಯ್ಕ ನಾಯ್ಕರ, ಭರಮಣ್ಣ ಪೂಜೇರ, ಪ್ರವಚನ ಆಯೋಜನೆ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತರು ಪಾಲ್ಗೊಂಡಿದ್ದರು.