ಶಿವಬಸವ ನಗರದ ಕಾರಂಜಿಮಠದಲ್ಲಿ ಶುಕ್ರವಾರ ಬಸವ ಜಯಂತಿ ಉತ್ಸವ ನಿಮಿತ್ತ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ ಕೆ.ಎಂ.ಜಾನಕಿ ಮಾತನಾಡಿದರು. ಗುರುಸಿದ್ದ ಸ್ವಾಮೀಜಿ, ಪ್ರೀತಿ ಕಾಮಕರ, ಹನುಮಂತ ಕೊಂಗಾಲಿ ಇತರರಿದ್ದರು.
ಬೆಳಗಾವಿ: ವಿಶ್ವಗುರು ಬಸವಣ್ಣನವರು ಸಮಾಜವನ್ನು ಸಮಾನತೆ ತಳಹದಿ ಮೇಲೆ ರೂಪಿಸಿದರು. ನಮ್ಮಿಂದ ಸಾಧ್ಯವಾಗದ್ದನ್ನು ಬಸವಣ್ಣನವರು ಅಂದೇ ಸಾಧಿಸಿದ್ದಾರೆ. ಅವರ ಕೊಡುಗೆ ಚಿರಸ್ಮರಣೀಯ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಹೇಳಿದರು.
ಇಲ್ಲಿನ ಶಿವಬಸವ ನಗರದ ಕಾರಂಜಿಮಠದಲ್ಲಿ ಶುಕ್ರವಾರ ಬಸವ ಜಯಂತಿ ಉತ್ಸವ ನಿಮಿತ್ತ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರು ಲಿಂಗ, ವರ್ಗ, ವರ್ಣದಲ್ಲಿ ಸಮಾನತೆ ಮೂಡಿಸಿದರು. ಬಸವಣ್ಣವರ ವಚನಗಳು ಜೀವನಕ್ಕೆ ಸಂದೇಶ ನೀಡುತ್ತವೆ. ಯುವಜನಾಂಗ ಅವುಗಳನ್ನು ಅರಿತು ಸಾಗಬೇಕು ಎಂದರು.
ಕಾರಂಜಿಮಠ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಒತ್ತಡದ ಬದುಕಿಗೆ ದಿವ್ಯೌಷಧಗಳಾಗಿರುವ ವಚನಗಳನ್ನು ತಿಳಿದುಕೊಂಡು ಸಾಗಿದರೆ, ಬಸವಣ್ಣನವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಬಸವ ಜಯಂತಿ ನಿಮಿತ್ತ ಜರುಗಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ವಿತರಿಸಲಾಯಿತು. ಪಾಲಿಕೆ ಮೇಯರ್ ಪ್ರೀತಿ ಕಾಮಕರ, ಉಪಮೇಯರ್ ಹನುಮಂತ ಕೊಂಗಾಲಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾಧ್ಯೆ ರತ್ನಪ್ರಭಾ ಬೆಲ್ಲದ, ಡಾ.ಎಫ್.ವಿ.ಮಾನ್ವಿ, ವಿ.ಕೆ.ಪಾಟೀಲ, ಗುರುದೇವ ಪಾಟೀಲ, ಮಹಾನಂದಾ ಲೋಕಣ್ಣವರ, ಬಸವರಾಜ ಮಾದಗೌಡ, ಕಿರಣ ಅಗಡಿ ಇತರರಿದ್ದರು.