ಬೆಳಗಾವಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೋಮವಾರ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ನೆತನ್ಯಾಹು, ಮೋದಿ ಭಾವಚಿತ್ರವುಳ್ಳ ಬ್ಯಾನರ್ ಅಳವಡಿಸಲಾಯಿತು.
ಬೆಳಗಾವಿ: ನಗರದಲ್ಲಿ ಅಳವಡಿಸಿರುವ ಇರಾನ್ ದೇಶದ ಮುಖಂಡ ಅಲಿ ಖಮೇನಿ ಪೋಸ್ಟರ್ ವಿರುದ್ಧ ಸಮರ ಸಾರಿರುವ ಶ್ರೀರಾಮ ಸೇನೆಯಿಂದ ಅಫ್ಜಲ್‌ಖಾನ್ ವಧೆ ಮಾಡುತ್ತಿರುವ ಛತ್ರಪತಿ ಶಿವಾಜಿ ಹಾಗೂ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಸೋಮವಾರ ಅಳವಡಿಸಿದೆ. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬ್ಯಾನರ್ ಅಳವಡಿಸಿದರು.
ಇದರಲ್ಲಿ ಯುಗಾದಿ ಶುಭಾಶಯವನ್ನೂ ಕೋರಲಾಗಿದೆ. ಇದೇ ರೀತಿ ನಗರದ ವಿವಿಧೆಡೆ ಬ್ಯಾನರ್ ಅಳವಡಿಸಲಾಗುತ್ತಿದೆ. ಖಮೇನಿಯ ಆಳೆತ್ತರದ ಕಟೌಟ್ ಅಳವಡಿಸಲಾಗಿದ್ದು, ಇದು ದೇಶದ್ರೋಹದ ಕೃತ್ಯ. ಕೂಡಲೇ ತೆರವುಗೊಳಿಸಬೇಕು ಎಂದು ಶ್ರೀರಾಮಸೇನೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿತ್ತು. ಆದರೆ ತೆರವು ಮಾಡದಿರುವುದರಿಂದ ಬ್ಯಾನರ್ ಅಭಿಯಾನ ಆರಂಭಿಸಿದ್ದೇವೆ ಎಂದು ಮುತಾಲಿಕ್ ತಿಳಿಸಿದ್ದಾರೆ.