ಬೈಲಹೊಂಗಲ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು. ಸದಾಶಿವ ಮಕ್ಕೋಜಿ, ಡಾ.ಎಸ್.ಎಸ್.ಸಿದ್ದಣ್ಣವರ, ಡಾ. ರವೀಂದ್ರಕುಮಾರ ಜಕನೂರ, ಬಸವರಾಜ ಜನ್ಮಟ್ಟಿ, ಡಾ.ಮಹಾಂತೇಶ ಕಳ್ಳಿಬಡ್ಡಿ ಇತರರಿದ್ದರು. 
ಬೆಳಗಾವಿ

ಬೈಲಹೊಂಗಲ ಆಸ್ಪತ್ರೆ ರಾಜ್ಯಕ್ಕೆ ೩ನೇ ಸ್ಥಾನ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಮಹಾಂತೇಶ ಕೌಜಲಗಿ ಮಾಹಿತಿ
  • ಸುಧಾರಣೆ ಸಮಿತಿ ಸಭೆ
ಬೈಲಹೊಂಗಲ: ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ರಾಜ್ಯದಲ್ಲಿಯೇ ಮಾದರಿಯಾಗಿ ಸಾರ್ವಜನಿಕರ ಸೇವೆಗೈಯುತ್ತಾ, ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಭವನದಲ್ಲಿ ಆಸ್ಪತ್ರೆ ಸುಧಾರಣೆ ಸಮಿತಿ ಸಭೆಯ ನಂತರ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಸ್ಪತ್ರೆಯು ಎಬಿಎಆರ್‌ಕೆ ಸರ್ವೇ ಪ್ರಕಾರ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿದೆ. ಮೊದಲ
ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲು ಶ್ರಮಿಸಲಾಗುತ್ತಿದೆ ಎಂದರು.
ಆಸ್ಪತ್ರೆಯಲ್ಲಿ ಪ್ರತ್ಯೇಕ ಮಗು, ತಾಯಿಯ ಆರೋಗ್ಯ ಕೇಂದ್ರ ಪ್ರಾರಂಭಿಸಿದ್ದು, ಎರಡು ವರ್ಷಗಳಲ್ಲಿ ದಿನಕ್ಕೆ ಸರಾಸರಿ ಸುಮಾರು ೧,೦೦೦ ಹೊರ ರೋಗಿಗಳು, ಸುಮಾರು ೧೦೦ ಒಳ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಚರ್ಮ, ರೇಡಿಯಾಲಾಜಿಸ್ಟ್ ವೈದ್ಯರನ್ನು ಹೊರತುಪಡಿಸಿ, ಅವಶ್ಯಕತೆಯ ೧೯ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಸೇವೆ, ಆಸ್ಪತ್ರೆಯ ಸ್ವಚ್ಛತೆ, ಸುಸಜ್ಜಿತ ಲ್ಯಾಬ್, ಆಕ್ಸಿಜನ್ ಸಹಿತ ತೀವ್ರ ನಿಗಾ ಘಟಕ, ಆಂಬುಲೆನ್ಸ್ ಸೇವೆ, ಡಯಾಲಿಸಿಸ್ ಕೇಂದ್ರ, ಸುರಕ್ಷಿತ ಹೆರಿಗೆ ಕೇಂದ್ರ, ಸುಸಜ್ಜಿತ ಕಟ್ಟಡ, ಒಳಾಂಗಣದ ಸಿಸಿ ರಸ್ತೆ, ಒಳಚರಂಡಿ ಸೇರಿ ಎಲ್ಲ ಮೂಲ ಸೌಕರ್ಯ ನೀಡಿದ ತೃಪ್ತಿ ನನಗಿದೆ ಎಂದರು.
೫೦ ಹಾಸಿಗೆಯ ತೀವ್ರ ನಿಗಾ ಘಟಕ (ಐಸಿಯು) ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ೪೧ ರೋಗಿಗಳು ಡಯಾಲಿಸಿಸ್ ಸೇವೆಗೆ ಒಳಗಾಗುತ್ತಿದ್ದಾರೆ. ಒಳರೋಗಿಗಳಿಗೆ ಊಟ, ಉಪಹಾರ ವ್ಯವಸ್ಥೆ ಕಲ್ಪಿಸಲಾಗಿದ್ದು, ೧೫ ಲಕ್ಷ ರೂ. ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ಮಾದರಿಯ ಅಕ್ಕ ಕೆಫೆ, ೫ ಕೋಟಿ ರೂ. ವೆಚ್ಚದಲ್ಲಿ ಆವರಣ ನಿರ್ಮಿಸಲು ಅನುದಾನ ಬಿಡುಗಡೆ ಹಂತದಲ್ಲಿದೆ ಎಂದರು.
ಮುಖ್ಯವೈದ್ಯಾಧಿಕಾರಿ ಡಾ.ರವೀಂದ್ರಕುಮಾರ ಜಕನೂರ ಮಾತನಾಡಿ, ಆಸ್ಪತ್ರೆಯಲ್ಲಿ ಒಳ ಹಾಗೂ ಹೊರರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತಿಂಗಳಿಗೆ ೨೩೦ಕ್ಕೂ ಹೆಚ್ಚು ಹೆರಿಗೆ, ೧೫೦ಕ್ಕೂ ಕುಟುಂಬ ಕಲ್ಯಾಣ ಶಸöಚಿಕಿತ್ಸೆ ನಡೆಯುತ್ತವೆ. ಇಲ್ಲಿ ೧೩೫ ಸಿಬ್ಬಂದಿ ಸೇವೆಯಲ್ಲಿದ್ದು, ಡಾ.ಪ್ರವೀಣ ಕುಲಕರ್ಣಿ ಅವರು ಬಂದಾಗಿನಿಂದ ಎಲ್ಲ ರೀತಿಯ ಶಸö ಚಿಕಿತ್ಸೆ ನಡೆಯುತ್ತಿವೆ. ಆಸ್ಪತ್ರೆಗೆ ಶಾಸಕ ಮಹಾಂತೇಶ ಕೌಜಲಗಿ ಎಲ್ಲ ಸೌಕರ್ಯ ಪೂರೈಸುತ್ತಿದ್ದು, ಜನತೆಯ ಆರೋಗ್ಯ ರಕ್ಷಣೆಯಲ್ಲಿ ಸಹಕರಿಸುತ್ತಿದ್ದಾರೆ ಎಂದರು.
ತಾಪಂ ಇಒ ಸಂಜೀವ ಜುನ್ನೂರ, ತಹಸೀಲ್ದಾರ್ ಸದಾಶಿವ ಮಕ್ಕೋಜಿ, ತಾಲೂಕು ವೈದ್ಯಾಧಿಕಾರಿ ಡಾ.ಎಸ್.ಎಸ್.ಸಿದ್ದನ್ನವರ, ನಗರಸಭೆ ಆಯುಕ್ತೆ ಭಾಗ್ಯಶ್ರೀ ಹುಗ್ಗಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಮಹಾಂತೇಶ ಕಳ್ಳಿಬಡ್ಡಿ, ಆಸ್ಪತ್ರೆಯ ಸುಧಾರಣಾ ಸಲಹಾ ಸಮಿತಿಯ ಸಿದ್ದಪ್ಪ ಶೀಗಿಹಳ್ಳಿ, ಜಿನ್ನಪ್ಪ ಮಲ್ಲಾಡಿ, ಸದಾನಂದ ನಂಜಪ್ಪನ್ನವರ, ಸಿದ್ದಯ್ಯ ಮಠಪತಿ, ಮಲ್ಲವ್ವ ಬುಡರಕಟ್ಟಿ ಇತರರು ಇದ್ದರು.
"

ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಚಿಕಿತ್ಸೆಗೆ ಹಣ ಪಡೆಯಬಾರದು. ಸಾರ್ವಜನಿಕರು ಹಣ ಬೇಡಿಕೆ ಇಟ್ಟವರ ಕುರಿತು ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು.