ಬೆಳಗಾವಿಯಲ್ಲಿ ಶನಿವಾರ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ಬಿಜೆಪಿ ಕಾರ್ಯಕರ್ತರನ್ನು ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡರು.
ಬೆಳಗಾವಿ: ದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯ ಪ್ರದರ್ಶನ ಮಳಿಗೆಯಲ್ಲಿ ನರೇಂದ್ರ ಮೋದಿ ವಿರುದ್ಧ ಘೊಷಣೆ ಕೂಗಿ ದಿಢೀರ್ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಕಾರ್ಯಕರ್ತರ ನಡೆ ಖಂಡಿಸಿ, ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಶನಿವಾರ ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದ್ದಾರೆ.
ನಗರದ ಕನ್ನಡ ಸಾಹಿತ್ಯ ಭವನದಿಂದ ರಾಹುಲ್ ಗಾಂಧಿ ಪ್ರತಿಕೃತಿ ಹಾಗೂ ಭಾವಚಿತ್ರಕ್ಕೆ ಧಿಕ್ಕಾರ ಹೇಳಿದ ಪೋಸ್ಟರ್‌ಗಳನ್ನು ಹಿಡಿದು
ಸಂಗೊಳ್ಳಿ ರಾಯಣ್ಣ ವೃತ್ತದತ್ತ ಹೊರಟಿದ್ದ ಕಾರ್ಯಕರ್ತರನ್ನು ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲೇ ಬ್ಯಾರಿಕೇಡ್ ಹಾಕಿ ತಡೆದ ಪೊಲೀಸರು, ಮುಂದೆ ಸಾಗಲು ಬಿಡಲಿಲ್ಲ. ಈ ವೇಳೆ ಬ್ಯಾರಿಕೇಡ್ ತಳ್ಳಿ ಮುಂದೆ ಹೋಗಲು ಯತ್ನಿಸಿದ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.
ದೇಶದ ಪ್ರತಿಷ್ಠಿತ ಶೃಂಗಸಭೆಯಲ್ಲಿ ಈ ರೀತಿ ಪ್ರತಿಭಟನೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಕಾಂಗ್ರೆಸ್ ಕಪ್ಪು ಮಸಿ ಬಳೆಯುವ ಯತ್ನ ಮಾಡಿದೆ. ಜಾಗತಿಕ ಮಟ್ಟದ ತಂತಜ್ಞಾನ ಕ್ಷೇತ್ರದಲ್ಲಿ ಭಾರತ ತನ್ನ ನಾಯಕತ್ವ ಪ್ರದರ್ಶಿಸಲು ಮುಂದಾಗಿದ್ದಾಗ ನಮ್ಮದೇ ದೇಶದ ಕಾಂಗ್ರೆಸ್ ಇದಕ್ಕೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ ಕಾರ್ಯಕರ್ತರು ರಾಹುಲ್ ಗಾಂಧಿ ವಿರುದ್ಧ ಘೋಷಣೆ ಕೂಗಿದರು.
ಬಿಜೆಪಿ ಮುತ್ತಿಗೆ ಯತ್ನದ ಹಿನ್ನೆಲೆಯಲ್ಲಿ ನಗರದ ಕನ್ನಡ ಸಾಹಿತ್ಯ ಭವನ, ಚನ್ನಮ್ಮ ವೃತ್ತ, ಜಿಲ್ಲಾಧಿಕಾರಿ ಕಚೇರಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಕಾಂಗ್ರೆಸ್ ಕಚೇರಿ ಸುತ್ತಮುತ್ತ ಸಂಜೆಯವರೆಗೂ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.