ಬೆಳಗಾವಿ: ಅವೈಜ್ಞಾನಿಕ ಯೋಜನೆಗಳ ಅನುಷ್ಠಾನ, ಆದಾಯ ಸೋರಿಕೆ, ಸಿಬ್ಬಂದಿ ಕೊರತೆ, ದುಂದುವೆಚ್ಚ, ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹೆಣಗಾಡುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆ ಮಧ್ಯಪ್ರದೇಶದ ‘ಇಂದೋರ್’ ಮಾದರಿಯ ಸ್ಮಾರ್ಟ್ ಆಡಳಿತ ಅನುಷ್ಠಾನಕ್ಕೆ ಮುಂದಾಗಿದೆ.
ಭಿಕ್ಷಾಟನೆಮುಕ್ತ ನಗರ, ಮೂಲಸೌಕರ್ಯ ನವೀಕರಣ, ಸ್ಮಾರ್ಟ್ ಆಡಳಿತ, ಪುನರ್ವಸತಿ ಯೋಜನೆಗಳ ಮೂಲಕ ಇಂದೋರ್ ಅಭಿವೃದ್ಧಿ ಸಾಧಿಸಿದೆ. ಇದೇ ಮಾದರಿಯಂತೆ ಬೆಳಗಾವಿ ಅಭಿವೃದ್ಧಿ ಮಾಡಬೇಕೆಂಬ ಸಂಕಲ್ಪದೊಂದಿಗೆ ನಾಲ್ಕು ದಿನ ಅಧ್ಯಯನ ಪ್ರವಾಸ ಕೈಗೊಂಡಿದ್ದ ಮಹಾನಗರ ಪಾಲಿಕೆ ಸದಸ್ಯರಿಗೆ ಯೋಜನೆ ಅನುಷ್ಠಾನ ಮಾಡುವುದಕ್ಕೆ ಅನುದಾನದ ಕೊರತೆ ಎದುರಾಗಿದೆ. ಇದಕ್ಕಾಗಿ ಕನಿಷ್ಠವೆಂದರೂ 1,000 ಕೋಟಿ ರೂ. ಅನುದಾನ ಹೊಂದಿಸುವುದೇ ಸವಾಲಿನ ಕೆಲಸವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳು, ವಿಶೇಷ ಅನುದಾನ ಅಡಿಯಲ್ಲಿ ನೂರಾರು ಕೋಟಿ ರೂ. ಅನುದಾನ, ಸ್ಮಾರ್ಟ್‌ಸಿಟಿ ಯೋಜನೆಯಡಿ 2 ಸಾವಿರ ಕೋಟಿ ರೂ. ಅನುದಾನ ವೆಚ್ಚ ಮಾಡಲಾಗಿದೆ. ಆದರೆ, ಇಲ್ಲಿಯವರೆಗೆ ಚರಂಡಿ, ರಸ್ತೆ, ಒಳಚರಂಡಿ, ಕಸ ವಿಲೇವಾರಿ ಸಮಸ್ಯೆ ಇತ್ಯರ್ಥವಾಗಿಲ್ಲ.
58 ವಾರ್ಡ್‌ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಪಾಲಿಕೆ ಪರದಾಡುತ್ತಿದೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನೂರಾರು ಕೋಟಿ ರೂ. ಅನುದಾನ ವೆಚ್ಚ ಮಾಡಿದರೂ ಕಸದ ಸಮಸ್ಯೆ ಜೀವಂತವಾಗಿದೆ. ಹಸಿ ಮತ್ತು ಒಣ ಕಸ ವಿಂಗಡಣೆ ಮಾಡಲಾಗುತ್ತಿಲ್ಲ. ಅಲ್ಲದೆ, ತನ್ನ ವಾರ್ಷಿಕ ಬಜೆಟ್‌ನಲ್ಲಿ ಚರಂಡಿ, ರಸ್ತೆ ಬಿಟ್ಟರೆ ಯಾವುದೇ ಕಾಮಗಾರಿ ಇರುವುದಿಲ್ಲ ಎಂದು ಪಾಲಿಕೆ ಮಾಜಿ ಸದಸ್ಯರು, ನಾಗರಿಕರು, ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾರ್ಡಿಗೊಬ್ಬ ಎನ್‌ಜಿಒ ಸಿಬ್ಬಂದಿ
ಮಹಾನಗರವನ್ನು ಕಾಡುತ್ತಿರುವ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹೆಣಗಾಡುತ್ತಿರುವ ಪಾಲಿಕೆ ಇಂದೋರ್ ಮಾದರಿಯಲ್ಲೇ ಕಸ ವಿಲೇವಾರಿ ಮಾಡುವ ಮಂತ್ರ ಜಪಿಸುತ್ತಿದೆ. ಹೀಗಾಗಿಯೇ ಮನೆ ಮನೆಯಿಂದ ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸುವುದಕ್ಕೆ ಯೋಜನೆ ಹಾಕಿಕೊಂಡಿದೆ. ಕಸದ ವೈಜ್ಞಾನಿಕ ವಿಲೇವಾರಿಗೆ ತಳಮಟ್ಟದಲ್ಲೇ ಯೋಜನೆ ರೂಪಿಸಿದರೂ ಅನುಷ್ಠಾನ ಕುಂಠಿತವಾಗುತ್ತಿದೆ. ಮೂಲದಲ್ಲೇ ಹಸಿ ಮತ್ತು ಒಣ ಕಸ ವಿಂಗಡಣೆಯಾಗುತ್ತಿಲ್ಲ. ಹೀಗಾಗಿ, ಕಸ ವಿಲೇವಾರಿಗೆ ಪ್ರತಿ ವಾರ್ಡ್‌ಗೆ ಒಬ್ಬ ಎನ್‌ಜಿಒ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಪಾಲಿಕೆ ಯೋಜನೆ ರೂಪಿಸಿಕೊಂಡಿದೆ.
ಇಂದೋರ್ ಮಹಾನಗರದಲ್ಲಿ ಕ್ರಮಬದ್ಧ ಯೋಜನೆ ಜಾರಿ
- ಇಂದೋರ್ ಮಹಾನಗರ ಪಾಲಿಕೆ ವಾರ್ಷಿಕ ಬಜೆಟ್ 4,500 ಕೋಟಿ ರೂ.
- 80ರಿಂದ 120 ಅಡಿ ಅಗಲದ ರಸ್ತೆಗಳು
- ಪ್ರತಿಯೊಂದು ಕಟ್ಟಡಕ್ಕೆ ವಾಹನ ಪಾರ್ಕಿಂಗ್ ಕಡ್ಡಾಯ
- ಕಟ್ಟಡ ಎದುರು, ರಸ್ತೆಗಳ ಬದಿಯಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ.
- ಶೇ.100 ಒಳಚರಂಡಿ, ಚರಂಡಿ ಸಂಪರ್ಕ ಜಾಲ ಸೌಲಭ್ಯ
- ಪ್ರತಿಯೊಂದು ಕಸ ವಿಲೇವಾರಿ ವಾಹನಕ್ಕೆ ಎನ್‌ಜಿಒ ಸಿಬ್ಬಂದಿ ನೇಮಕ
- ಸ್ಮಾರ್ಟ್‌ಸಿಟಿ ಕಮಾಂಡ್ ಕಂಟ್ರೋಲ್ ಕೇಂದ್ರದ ಮೂಲಕ ನಿರ್ವಹಣೆ
- ಪ್ರತಿಯೊಂದು ಕಟ್ಟಡಕ್ಕೆ ಇ-ಖಾತಾ, ತೆರಿಗೆ ಕಡ್ಡಾಯ
ಬೆಳಗಾವಿ ನಗರದ ನ್ಯೂನತ
- ಶೇ.100 ಚರಂಡಿ, ಒಳಚರಂಡಿ ಸಂಪರ್ಕ ಜಾಲ ಇಲ್ಲ.
- ವೈಜ್ಞಾನಿಕ, ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ಅನುಷ್ಠಾನ ಇಲ್ಲ.
- ವಾರ್ಷಿಕ ಕೋಟ್ಯಂತರ ರೂ. ತೆರಿಗೆ ಸೋರಿಕೆ
- ಕಸ ವಿಲೇವಾರಿ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ
- ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರ ನೇಮಕಾತಿ ಇಲ್ಲ.
- ಸ್ಮಾರ್ಟ್‌ಸಿಟಿ ಕಮಾಂಡ್ ಕಂಟ್ರೋಲ್ ಕೇಂದ್ರ ಸ್ಥಗಿತ.
"
ಬೆಳಗಾವಿ ನಗರದಲ್ಲಿ ಇಂದೋರ್ ಮಾದರಿಯಲ್ಲಿ ಕಸ ವಿಲೇವಾರಿ ಅನುಷ್ಠಾನ ಮಾಡಬೇಕಾ ದರೆ ಸದ್ಯ ಕಾರ್ಯನಿರ್ವಹಿಸುತ್ತಿರುವ 1,671 ಪೌರ ಕಾರ್ಮಿಕರ ಸಂಖ್ಯೆಯನ್ನು 3 ಸಾವಿರಕ್ಕೆ ಹೆಚ್ಚಿಸಬೇಕು. ಕಸ ವಿಲೇವಾರಿಗೆ 500 ವಾಹನ ನಿಯೋಜಿಸಬೇಕು. ಬ್ಲಾಕ್ ಸ್ಪಾಟ್‌ಗಳನ್ನು ಕಡಿಮೆ ಮಾಡಬೇಕು. ಕಮಾಂಡ್ ಕಂಟ್ರೋಲ್ ಕೇಂದ್ರ ಮೂಲಕ ನಿರ್ವಹಣೆ ಮಾಡಬೇಕು. ಇದೆಲ್ಲ ಕಾರ್ಯರೂಪಕ್ಕೆ ಬರಲು ಸಮಯ ತೆಗೆದುಕೊಳ್ಳುತ್ತದೆ.
— | ಹನಮಂತ ಕಲಾದಗಿ ಪರಿಸರ ವಿಭಾಗದ ತಾಂತ್ರಿಕ ಸಹಾಯಕ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ