ಅಥಣಿ ಗಚ್ಚಿನಮಠದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಶಿವಬಸವ ಸ್ವಾಮೀಜಿ, ಅಭಿನವ ಮುರುಘೇಂದ್ರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ ಇತರರಿದ್ದರು.
- ಶಿವಬಸವ ಸ್ವಾಮೀಜಿ ಬಣ್ಣನೆ
- ಮುರುಘೇಂದ್ರ ಶಿವಯೋಗಿ ಜಯಂತಿ
ಅಥಣಿ: ಬಸವತತ್ತ್ವ ಅಳವಡಿಸಿಕೊಂಡು ಅದರಂತೆ ನಡೆದ ಮಹಾತಪಸ್ವಿ ಲಿಂ.ಮುರುಘೇಂದ್ರ ಶಿವಯೋಗಿಗಳು ಪ್ರಥಮ ಬಾರಿ ಬಸವ ಜಯಂತಿ ಆಚರಿಸಿ, ಬಸವಣ್ಣವರನ್ನು ಅಪ್ಪ ಎಂದು ಕರೆದ ಮಹಾತ್ಮರು ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಗಚ್ಚಿನಮಠದಲ್ಲಿ ಲಿಂ.ಮುರುಘೇಂದ್ರ ಶಿವಯೋಗಿಗಳ ೧೯೧ನೇ ಜಯಂತಿ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಬಸವಣ್ಣನವರು ತೋರಿದ ಪಥದಲ್ಲಿ ಸಾಗಿದ ಮುರುಘೇಂದ್ರ ಶಿವಯೋಗಿಗಳು ನಿತ್ಯ ಸ್ಮರಣೀಯರಾಗಿದ್ದಾರೆ. ಗಚ್ಚಿನಮಠ ನಾಡಿಗೆ ಮಾದರಿಯಾಗಿದ್ದು, ಇಲ್ಲಿ ಕಾಯಕ, ದಾಸೋಹ, ಆಶ್ರಯ ಜತೆಗೆ ಅನುಭಾವದ ಜ್ಞಾನಪ್ರಸಾರ ನಡೆಯುತ್ತದೆ ಎಂದರು.
ಶಿರ್ಷಾಡ ಹಿರೇಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ‍್ಯ ಹೋರಾಟಗಾರರಿಗೆ ಆಶೀರ್ವದಿಸಿದ ಮುರುಘೇಂದ್ರ ಶಿವಯೋಗಿಗಳು, ಸ್ವಾತಂತ್ರ‍್ಯ ಕುರಿತು ಬಾಲಗಂಗಾಧರ ತಿಲಕ ಅವರಿಗೆ ಭರವಸೆ ನೀಡಿದ್ದರು ಎಂದರು.
ಬೆಳಗ್ಗೆ ಶ್ರೀಗಳ ಕರ್ತೃ ಗದ್ದುಗೆಗೆ ವಚನಾಭಿಷೇಕ, ಮಹಾಮಂಗಳಾರತಿ ನಡೆಯಿತು. ನಂತರ ಶಿವಯೋಗಿಗಳ ಭಾವಚಿತ್ರ ಮತ್ತು ವಚನ ಸಂಪುಟಗಳನ್ನಿಟ್ಟ ಪಲ್ಲಕ್ಕಿ ಉತ್ಸವ ಸಕಲ ವಾದ್ಯಮೇಳದೊಂದಿಗೆ ಸಾಗಿತು.
ಮಲ್ಲಿಕಾರ್ಜುನ ಸ್ವಾಮೀಜಿ, ಶಿವಯೋಗಿ ಮುರುಘೇಂದ್ರ ಸ್ವಾಮಿ ವಿದ್ಯಾಪೀಠ ಮತ್ತು ಮರುಳಶಂಕರ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.