ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಜಯಗಳಿಸಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಅಭಿಮಾನಿಗಳು ಶುಭಹಾರೈಸಿದರು. ಲಕ್ಷ್ಮಣರಾವ್ ಚಿಂಗಳೆ, ರಾಜೇಂದ್ರ ಪಾಟೀಲ, ಪವನ ಪಾಟೀಲ ಇತರರಿದ್ದರು.
ಬೆಳಗಾವಿ: ಕೋರ್ಟ್ ವ್ಯಾಜ್ಯದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹರ್ಕಾರಿ ಬ್ಯಾಂಕ್ (ಬಿಡಿಸಿಸಿ) ನಾಲ್ಕು ಕ್ಷೇತ್ರಗಳ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟಿಸಲಾಗಿದ್ದು, ನಿರೀಕ್ಷೆಯಂತೆ ಮಾಜಿ ಸಂಸದರಾದ ರಮೇಶ ಕತ್ತಿ, ಅಣ್ಣಾಸಾಹೇಬ ಜೊಲ್ಲೆ ಗೆಲುವು ಸಾಧಿಸಿದ್ದಾರೆ.
ಬಿಡಿಸಿಸಿ ಬ್ಯಾಂಕಿನ 16 ಕ್ಷೇತ್ರಗಳ ಪೈಕಿ 9 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿತ್ತು. ಉಳಿದ 7 ಕ್ಷೇತ್ರಗಳಿಗೆ ಅ.19ರಂದು ಚುನಾವಣೆ ನಡೆದಿತ್ತು. ಅದರಲ್ಲಿ 3 ಸ್ಥಾನಗಳ ಲಿತಾಂಶ ಬಂದಿತ್ತು. ಕೋರ್ಟ್‌ನಲ್ಲಿ ವ್ಯಾಜ್ಯ ಇದ್ದಿದ್ದರಿಂದ ಉಳಿದ ನಾಲ್ಕು (ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ನಿಪ್ಪಾಣಿ ಮತ್ತು ಹುಕ್ಕೇರಿ) ಕ್ಷೇತ್ರಗಳ ಲಿತಾಂಶ ಪ್ರಕಟವಾಗಿರಲಿಲ್ಲ. ಹೀಗಾಗಿ ಕೋರ್ಟ್ ಮತದಾನಕ್ಕೆ ಮಾತ್ರ ಅವಕಾಶ ನೀಡಿ, ಮತ ಎಣಿಕೆ ಮತ್ತು ಫಲಿತಾಂಶಕ್ಕೆ ತಡೆ ನೀಡಿತ್ತು. ಈಗ ಪ್ರಕರಣ ಮುಗಿದಿರುವ ಹಿನ್ನೆಲೆ ಚುನಾವಣಾಧಿಕಾರಿ ಶ್ರವಣ ನಾಯ್ಕ ನೇತೃತ್ವದಲ್ಲಿ ಭಾನುವಾರ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಮತ ಎಣಿಕೆ ಕೈಗೊಂಡು, ಫಲಿತಾಂಶ ಪ್ರಕಟಿಸಲಾಯಿತು.
ಹುಕ್ಕೇರಿ ಕ್ಷೇತ್ರದಿಂದ ಮಾಜಿ ಸಂಸದ ರಮೇಶ ಕತ್ತಿ 59 ಮತ, ನಿಪ್ಪಾಣಿಯಿಂದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ 71 ಮತ, ಚನ್ನಮ್ಮನ ಕಿತ್ತೂರಿನಿಂದ ನಾನಾಸಾಹೇಬ ಪಾಟೀಲ 17 ಹಾಗೂ ಬೈಲಹೊಂಗದಿಂದ ಮಾಜಿ ಶಾಸಕ ಮಹಾಂತೇಶ ದೊಡಗೌಡರ 54 ಮತಗಳಿಂದ ಗೆಲುವು ಸಾಧಿಸಿದರು. ಇವರ ಪ್ರತಿಸ್ಪರ್ಧಿಗಳಾಗಿದ್ದ ರಾಜೇಂದ್ರ ಪಾಟೀಲ 32, ಉತ್ತಮ ಪಾಟೀಲ 48, ವಿಕ್ರಮ ಇನಾಮದಾರ 15 ಹಾಗೂ ವಿಶ್ವನಾಥ ಪಾಟೀಲ 21 ಮತ ಪಡೆದುಕೊಂಡಿದ್ದಾರೆ.
ಫಲಿತಾಂಶ ಪ್ರಕಟಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚುನಾವಣಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಶ್ರವಣ ನಾಯ್ಕ, ಕೋರ್ಟ್ ಸೂಚನೆ ಪಾಲಿಸಿ, ಫಲಿತಾಂಶ ಪ್ರಕಟಿಸಿದ್ದೇವೆ. ನಿಪ್ಪಾಣಿಯ 7 ಪಿಕೆಪಿಎಸ್ ಮತಗಳ ಎಣಿಕೆ ಮಾಡದಂತೆ ಕೋರ್ಟ್ ಸೂಚನೆ ಇತ್ತು. ಅದರ ಹೊರತಾಗಿ ಅ.19ರಂದು ಆಗಿರುವ ಮತದಾನದಂತೆ ಫಲಿತಾಂಶ ಪ್ರಕಟಿಸಬಹುದೆಂಬ ನಿರ್ದೇಶನವಿದೆ. ಹೀಗಾಗಿ 7 ಮತಗಳನ್ನು ಹೊರತುಪಡಿಸಿ ನಿಪ್ಪಾಣಿ ಕ್ಷೇತ್ರದ ಫಲಿತಾಂಶ ಪ್ರಕಟಿಸುತ್ತಿದ್ದೇವೆ ಎಂದು ವಿವರಿಸಿದರು.
ಅಡ್ಡ ಮತದಾನದ ಗೆಲುವು: ಚನ್ನಮ್ಮನ ಕಿತ್ತೂರು ಕ್ಷೇತ್ರದಲ್ಲಿ ಜಾರಕಿಹೊಳಿ ಬಣದ ವಿಕ್ರಮ ಇನಾಮದಾರ ಅವರನ್ನು ಸೋಲಿಸಿರುವ ಶಾಸಕ ಬಾಬಾಸಾಹೇಬ ಪಾಟೀಲರ ಸಹೋದರ ನಾನಾಸಾಹೇಬ ಪಾಟೀಲ, ನಮ್ಮದು ಅಡ್ಡ ಮತದಾನದ ಗೆಲುವಾಗಿದ್ದು, ಮುಂದೆ ಸತೀಶ ಜಾರಕಿಹೊಳಿ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ಒಟ್ಟು 32ರ ಪೈಕಿ ನನಗೆ 17 ಮತ ಬಂದಿವೆ. ಮೊದಲು ನಮ್ಮ ಹತ್ತಿರ 10, ಅವರ ಬಳಿ 22 ಮತದಾರರಿದ್ದರು. ಆ ಕಡೆಯಿಂದ 7 ಮತದಾರರು ನಮ್ಮನ್ನು ಬೆಂಬಲಿಸಿ, ಅಡ್ಡ ಮತದಾನ ಮಾಡಿದ್ದರಿಂದ ವಿಜಯ ಸಾಧಿಸಿದ್ದೇವೆ ಎಂದರು.
ನನ್ನದೇ ಜವಾಬ್ದಾರಿ ಇತ್ತು: ಚನ್ನಮ್ಮನ ಕಿತ್ತೂರು ಕ್ಷೇತ್ರದಲ್ಲಿ ನನ್ನದೇ ಜವಾಬ್ದಾರಿ ಇತ್ತು. ಅನಿವಾರ್ಯ ಕಾರಣಗಳಿಂದ ಸೋತಿದ್ದೇವೆ. ಈ ಸಂಬಂಧ ನನಗೆ ಯಾವುದೇ ಅಸಮಾಧಾನವಿಲ್ಲ. ಮೊದಲಿನಂತೇ ಬಣದಲ್ಲಿದ್ದೇನೆಂದು ಹೇಳಿರುವ ಮಾಜಿ ಶಾಸಕ ಮಹಾಂತೇಶ ದೊಡಗೌಡರ, ನನಗೆ ಅಸಮಾಧಾನವಿರುವ ಬಗ್ಗೆ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರೆ ಅವರೇ ಅದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ. ಸದ್ಯಕ್ಕೆ ಕಿತ್ತೂರು ಕ್ಷೇತ್ರದ ಸೋಲು ಒಪ್ಪಿಕೊಂಡಿದ್ದೇನೆ. ಸಮಯ ಬಂದಾಗ ಎಲ್ಲದಕ್ಕೂ ಉತ್ತರಿಸುವೆ ಎಂದರು.
10ರಂದು ಅಧ್ಯಕ್ಷರ ಆಯ್ಕೆ
ಎಲ್ಲ 16 ಕ್ಷೇತ್ರಗಳ ಚುನಾವಣೆ ಫಲಿತಾಂಶ ಅಂತಿಮಗೊಂಡಿರುವ ಹಿನ್ನೆಲೆ ನ.10ರಂದು ಬ್ಯಾಂಕಿನ ಐದು ವರ್ಷದ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಿಗದಿಪಡಿಸಲಾಗಿದೆ. ಅಂದು ಮಧ್ಯಾಹ್ನ 3ಕ್ಕೆ ಪದಾಧಿಕಾರಿಗಳ ಆಯ್ಕೆ ಕುರಿತು ಚುನಾವಣಾಧಿಕಾರಿ ಶ್ರವಣ ನಾಯ್ಕ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದ್ದು, ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಲು ಸೂಚಿಸಲಾಗಿದೆ.
ನಾನೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ
ಲಿತಾಂಶ ಪ್ರಕಟವಾದ ನಂತರ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ನಮ್ಮ ಬಣದಲ್ಲಿರುವ ಎಲ್ಲರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇವೆ. ಅದರಲ್ಲಿ ನಾನೂ ಸಹ ಆಕಾಂಕ್ಷಿ. ಈ ಬಗ್ಗೆ ಬಾಲಚಂದ್ರ ಜಾರಕಿಹೊಳಿ, ಸತೀಶ ಜಾರಕಿಹೊಳಿ ಜತೆಗೆ ಚರ್ಚಿಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದರು.ರಮೇಶ ಕತ್ತಿ ಮತ್ತು ಲಕ್ಷ್ಮಣ ಸವದಿ ಬಣಕ್ಕೆ ಲಿಂಗಾಯತ ಟೀಮ್ ಹೋಗುತ್ತದೆಂಬ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ಅವರು ಎಲ್ಲಿ ಹೋಗುತ್ತಾರೆ ಎಂಬುದನ್ನು ಕೇಳಿ ನೋಡೋಣ. ಚರ್ಚೆಗಳಂತೆ ಯಾವುದೂ ಆಗುವುದಿಲ್ಲ. ತಮಗೆ ಬೇಕಾದಂತೆ ಕೆಲವರು ಚರ್ಚೆ ಮಾಡುತ್ತಿರುತ್ತಾರೆ. ಆದರೆ ನಮ್ಮ ಬಣ ಗಟ್ಟಿಯಾಗಿದೆ. ನಮ್ಮವರನ್ನು ಸೆಳೆಯಲು ಪ್ರಯತ್ನಿಸಿದರೆ ಅವರಿಗೆ ನಿರಾಸೆಯಾಗುವುದು ಖಚಿತ ಎಂದರು.