ದೇವದಾಸಿಯರ ಮಾಸಾಶನ ಹೆಚ್ಚಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಡಾ.ಸೀತವ್ವ ಜೋಡಟ್ಟಿ, ಯಲ್ಲವ್ವ ಪರಸನ್ನವರ, ಯಮನವ್ವ ಮಾದರ, ರೇಖಾ ಭಂಡಾರಿ, ಸಾಗರ ಶಿವಕ್ಕನ್ನವರ ಇತರರಿದ್ದರು. 
ಬೆಳಗಾವಿ

ದೇವದಾಸಿಯರ ಮಾಸಾಶನ ಹೆಚ್ಚಿಸಿ

ಬೆಳಗಾವಿ: ಚಳಿಗಾಲ ಅಧಿವೇಶನ ನಿಮಿತ್ತ ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಸುವರ್ಣ ಗಾರ್ಡನ್ ಹಾಗೂ ಯಡಿಯೂರಪ್ಪ ಮಾರ್ಗದ ಬಳಿ ನಿಗದಿಪಡಿಸಿರುವ ಪ್ರತಿಭಟನಾ ವೇದಿಕೆಗಳಲ್ಲಿ ಗುರುವಾರ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 8ಕ್ಕೂ ಅಧಿಕ ಸಂಘಟನೆಗಳು ಧರಣಿ ನಡೆಸಿ, ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದವು. ಸರ್ಕಾರದ ಪರ ಸಚಿವ ಜಮೀರ್ ಅಹಮ್ಮದ್‌ಖಾನ್ ಮನವಿ ಸ್ವೀಕರಿಸಿ ಮುಖ್ಯಮಂತ್ರಿ ಗಮನಕ್ಕೆ ತರುವ ಭರವಸೆ ನೀಡಿದರು.
ದೇವದಾಸಿಯರ ಮಾಸಾಶನ ಹೆಚ್ಚಿಸಿ ದೇವದಾಸಿ ಮಹಿಳೆಯರಿಗೆ ಮಾಸಾಶನ 3 ಸಾವಿರ ರೂ.ದಿಂದ 5 ಸಾವಿರ ರೂ.ಗೆ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆಯಿಂದ ಪ್ರತಿಭಟಿಸಲಾಯಿತು.
ರಾಜ್ಯದಲ್ಲಿ 48 ಸಾವಿರ ದೇವದಾಸಿ ಮಹಿಳೆಯರಿದ್ದು, ತಲಾ ಎರಡು ಎಕರೆ ಜಮೀನು ನೀಡುವುದು, ಉದ್ಯೋಗ ಮತ್ತು ಕೃಷಿ ಚಟುವಟಿಕೆ ಕೈಗೊಳ್ಳಲು ಸಾಲ-ಸೌಲಭ್ಯ ಕಲ್ಪಿಸಬೇಕು, ಅಂತ್ಯೋದಯ ಪಡಿತರ ಚೀಟಿ ನೀಡುವುದು, ಮನೆ ಇಲ್ಲದವರಿಗೆ ಸೂರು ಒದಗಿಸುವುದು, ದೇವದಾಸಿ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಬೇಕೆಂದು ಮನವಿ ಮಾಡಿದರು.
ಪದ್ಮಶ್ರೀ ಪುರಸ್ಕೃತ ಡಾ.ಸೀತವ್ವ ಜೋಡಟ್ಟಿ, ಯಲ್ಲವ್ವ ಪರಸನ್ನವರ, ಯಮನವ್ವ ಮಾದರ, ರೇಖಾ ಭಂಡಾರಿ, ಸಾಗರ ಶಿವಕ್ಕನ್ನವರ ಇತರರಿದ್ದರು.