ಅಪ್ಪಯ್ಯ ಸ್ವಾಮೀಜಿ ಜಾತ್ರಾ ಮಹೋತ್ಸವ ಅಂಗವಾಗಿ ಸಂಗ್ರಾಮಕಲ್ಲು ಎತ್ತುವ ಸ್ಪರ್ಧೆ ನಡೆಯಿತು. ಮಲ್ಲಪ್ಪ ನೇಮಗೌಡ, ಶಂಕರಯ್ಯ ಮಠಪತಿ ಇತರರಿದ್ದರು.
ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ದಡಕೆ ತೋಟದ ಅಪ್ಪಯ್ಯ ಸ್ವಾಮೀಜಿ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸ್ಪರ್ಧೆಗಳೊಂದಿಗೆ ಶುಕ್ರವಾರ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ಗದ್ದುಗೆಗೆ ಮಹಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿತು. ಬಳಿಕ ಭಕ್ತರು ನೈವೇದ್ಯ ಅರ್ಪಿಸಿ, ದರ್ಶನ ಪಡೆದರು. ತದನಂತರ ಕರಡಿ ಮಜಲು ಹಾಗೂ ವಿವಿಧ ಕಲಾತಂಡದೊಂದಿಗೆ ಕರಿಸಿದ್ಧೇಶ್ವರ ಹಾಗೂ ಅಪ್ಪಯ್ಯಸ್ವಾಮೀಜಿ ಪಲ್ಲಕ್ಕಿ ಉತ್ಸವ ಜರುಗಿತು. ಮಧ್ಯಾಹ್ಯ ಸಂಗ್ರಾಮಕಲ್ಲು, ಗುಂಡುಕಲ್ಲು, ಚೀಲ ಎತ್ತುವ ಹಾಗೂ ಚಕ್ಕಡಿ ಹಾರಿ ಎತ್ತುವ ಸ್ಪರ್ಧೆಗಳು ಜನರನ್ನು ರಂಜಿಸಿದವು.
ಸಂಜೆ ದೇವಸ್ಥಾನದಿಂದ ಅಗಸಿ ಬಾಗಿಲವರೆಗೆ ರಥೋತ್ಸವ ಸಂಭ್ರಮದಿಂದ ನೆರವೇರಿತು. ಈ ವೇಳೆ ಭಕ್ತರು ಉತ್ತತ್ತಿ, ಹೂವು ಅರ್ಪಿಸಿ, ಹರಕೆ ತೀರಿಸಿದರು. ಮಲ್ಲಪ್ಪ ನೇಮಗೌಡ, ಶಂಕರಯ್ಯ ಮಠಪತಿ, ಶಿವಾನಂದ ಐಗಳಿ, ಯಶವಂತ ಪೋಳ, ಶೌಕತ್ ಪಾಚ್ಚಾಪುರ, ಶಿವನಿಂಗ ಅಡಹಳ್ಳಿ, ಯಾದಪ್ಪ ಧಡಕೆ, ಬಸವರಾಜ ಹುದ್ದಾರ, ಬಸವರಾಜ ಚಮಕೇರಿ, ಈರಯ್ಯ ಮಠಪತಿ, ಗಣೇಶ ಧಡಕೆ ಇತರರಿದ್ದರು.