ಬೈಲಹೊಂಗಲ ತಾಲ್ಲೂಕಿನ ಮೇಕಲಮರಡಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಪಶು ಆರೋಗ್ಯ ಶಿಬಿರದಲ್ಲಿ ಅರ್ಹ ರೈತರಿಗೆ ಕ್ರಿಮಿನಾಶಕ ಔಷಧ, ಖನಿಜ ಮಿಶ್ರಣವುಳ್ಳ ಕಿಟ್ ವಿತರಿಸಲಾಯಿತು.
ಬೆಳಗಾವಿ: ಪರಿಶಿಷ್ಟ ಜಾತಿ ಸಮುದಾಯದ ರೈತರಿಗೆ ಪಶುಸಂಗೋಪನೆ ಕ್ಷೇತ್ರದಲ್ಲಿ ಆರ್ಥಿಕ ಮತ್ತು ತಾಂತ್ರಿಕ ಸಹಾಯ ಒದಗಿಸಿ ಅವರ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಎಸ್‌ಸಿಎಸ್‌ಪಿ ಉಪಯೋಜನೆಯಡಿಯಲ್ಲಿ ಪಶುಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಅರ್ಹ ರೈತರು ಇದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮತ್ತಿಕೊಪ್ಪದ ಐಸಿಎಆರ್ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನ ತಜ್ಞ ಡಾ.ಗುರುರಾಜ ಕೌಜಲಗಿ ಹೇಳಿದರು.
ಬೈಲಹೊಂಗಲ ತಾಲ್ಲೂಕಿನ ಮೇಕಲಮರಡಿ ಗ್ರಾಮದಲ್ಲಿ ಐಸಿಎಆರ್‌ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ ಹಾಗೂ ಬೈಲಹೊಂಗಲ ತಾಲೂಕು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಎಸ್‌ಸಿಎಸ್‌ಪಿ ಉಪಯೋಜನೆಯಡಿ ಸೋಮವಾರ ಏರ್ಪಡಿಸಿದ್ದ ಪಶು ಆರೋಗ್ಯ ಶಿಬಿರದಲ್ಲಿ ಸಂಯೋಜಕರಾಗಿ ಪಾಲ್ಗೊಂಡು ಮಾತನಾಡಿದ ಅವರು, ಪಶುಗಳ ನಿಯಮಿತ ಲಸಿಕೆ, ಕ್ರಿಮಿನಾಶಕ ಔಷಧ ನೀಡುವುದು, ಖನಿಜ ಮಿಶ್ರಣ ಮತ್ತು ಸಮತೋಲನ ಆಹಾರದ ಮಹತ್ವ, ಹಾಲು ಉತ್ಪಾದನೆ ಹೆಚ್ಚಿಸಲು ಮತ್ತು ಪ್ರಜನನ ಸಮಸ್ಯೆಗಳನ್ನು ತಪ್ಪಿಸಲು ಕೈಗೊಳ್ಳಬೇಕಾದ ಅಗತ್ಯ ನಿರ್ವಹಣೆ ಹಾಗೂ ಹಸು, ಎಮ್ಮೆ, ಕುರಿ ಮತ್ತು ಮೇಕೆಗಳಲ್ಲಿ ಸಾಮಾನ್ಯವಾಗಿ ಕಾಣುವ ರೋಗಗಳ ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ ಇಲಾಖೆಯ ಹಿರಿಯ ಪಶುವೈದ್ಯಾಧಿಕಾರಿ ಡಾ.ಸುದರ್ಶನ ಗಡಾದ ತಾಂತ್ರಿಕ ಸಹಕಾರ ನೀಡಿದರು. ಶಿಬಿರದಲ್ಲಿ ಉಚಿತ ಚಿಕಿತ್ಸಾ ಸೇವೆ, ಲಸಿಕೆ, ಕ್ರಿಮಿನಾಶಕ ಹಾಗೂ ಖನಿಜ ಮಿಶ್ರಣ ವಿತರಣೆ ಮಾಡಲಾಯಿತು.
ಶಿಬಿರದಲ್ಲಿ ಮೇಕಲಮರಡಿ ಗ್ರಾಮದ ಸುಮಾರು 30 ಪರಿಶಿಷ್ಟ್ಟ ಜಾತಿ ರೈತರು ಭಾಗವಹಿಸಿ, ಒಟ್ಟು 50ಕ್ಕೂ ಹೆಚ್ಚು ದನ, ಎಮ್ಮೆ, ಕುರಿ ಮತ್ತು ಮೇಕೆಗಳ ಆರೋಗ್ಯ ತಪಾಸಿಸಿಕೊಂಡು, ಚಿಕಿತ್ಸೆ ಪಡೆದರು. ಪಶುಗಳಿಗೆ ಕೀಟನಾಶಕ ಔಷಧ(ಡೀವಾಮಿರ್ಂಗ್), ಖನಿಜ ಮಿಶ್ರಣ ವಿತರಣೆ, ಹೊರಪರೋಪಜೀವಿ ನಿಯಂತ್ರಣ ಸಲಹೆ ಹಾಗೂ ಸಂತಾನೋತ್ಪತ್ತಿ ಸಮಸ್ಯೆಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು.
ರೈತರಿಗೆ ವೈಜ್ಞಾನಿಕ ಪಶುಸಂಗೋಪನೆ, ಸಮತೋಲನ ಆಹಾರ ಪದ್ಧತಿ, ಲಸಿಕೆ ವೇಳಾಪಟ್ಟಿ ಹಾಗೂ ಹಾಲು ಉತ್ಪಾದನೆ ಹೆಚ್ಚಿಸುವ ವಿಧಾನಗಳ ಕುರಿತು ಜಾಗೃತಿ ಮೂಡಿಸಲಾಯಿತು. ಸುರೇಶ ತಲ್ಲೂರ, ವಿನೋದ ಕರಡಿಗುದ್ದಿ ಇತರರಿದ್ದರು.