ಬೈಲಹೊಂಗಲ ತಾಲೂಕಿನ ಮೇಕಲಮರಡಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಶು ಆರೋಗ್ಯ ಶಿಬಿರದಲ್ಲಿ ಅರ್ಹ ರೈತರಿಗೆ ಕ್ರಿಮಿನಾಶಕ ಔಷಧ, ಖನಿಜ ಮಿಶ್ರಣವುಳ್ಳ ಕಿಟ್ ವಿತರಿಸಲಾಯಿತು. ಡಾ.ಗುರುರಾಜ ಕೌಜಲಗಿ, ಡಾ.ಸುದರ್ಶನ ಗಡಾದ, ಸುರೇಶ ತಲ್ಲೂರ, ವಿನೋದ ಕರಡಿಗುದ್ದಿ ಇತರರಿದ್ದರು.
ಬೆಳಗಾವಿ: ಪರಿಶಿಷ್ಟ ಜಾತಿ ಸಮುದಾಯದ ರೈತರಿಗೆ ಪಶುಸಂಗೋಪನೆ ಕ್ಷೇತ್ರದಲ್ಲಿ ಆರ್ಥಿಕ ಮತ್ತು ತಾಂತ್ರಿಕ ಸಹಾಯ ಒದಗಿಸಿ ಅವರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಎಸ್‌ಸಿಎಸ್‌ಪಿ ಉಪಯೋಜನೆಯಡಿ ಪಶುಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಮತ್ತಿಕೊಪ್ಪದ ಐಸಿಎಆರ್ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನ ತಜ್ಞ ಡಾ.ಗುರುರಾಜ ಕೌಜಲಗಿ ಹೇಳಿದರು. ಬೈಲಹೊಂಗಲ ತಾಲೂಕಿನ ಮೇಕಲಮರಡಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಶು ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು. ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ ಇಲಾಖೆ ಹಿರಿಯ ಪಶುವೈದ್ಯಾಧಿಕಾರಿ ಡಾ.ಸುದರ್ಶನ ಗಡಾದ ತಾಂತ್ರಿಕ ಸಹಕಾರ ನೀಡಿದರು. ಶಿಬಿರದಲ್ಲಿ ಮೇಕಲಮರಡಿ ಗ್ರಾಮದ 30 ಪರಿಶಿಷ್ಟ್ಟ ಜಾತಿ ರೈತರು ಭಾಗವಹಿಸಿ 50ಕ್ಕೂ ಹೆಚ್ಚು ದನ, ಎಮ್ಮೆ, ಕುರಿ ಮತ್ತು ಮೇಕೆಗಳಿಗೆ ಚಿಕಿತ್ಸೆ ಕೊಡಿಸಿದರು. ಪಶುಗಳಿಗೆ ಕೀಟನಾಶಕ ಔಷಧ (ಡಿವಾರ್ಮಿಂಗ್), ಖನಿಜ ಮಿಶ್ರಣ ವಿತರಣೆ, ಹೊರಪರೋಪಜೀವಿ ನಿಯಂತ್ರಣ ಸಲಹೆ ಹಾಗೂ ಸಂತಾನೋತ್ಪತ್ತಿ ಸಮಸ್ಯೆಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ವೈಜ್ಞಾನಿಕ ಪಶುಸಂಗೋಪನೆ, ಸಮತೋಲನ ಆಹಾರ ಪದ್ಧತಿ, ಲಸಿಕೆ ವೇಳಾಪಟ್ಟಿ ಹಾಗೂ ಹಾಲು ಉತ್ಪಾದನೆ ಹೆಚ್ಚಿಸುವ ವಿಧಾನಗಳ ಕುರಿತು ಜಾಗೃತಿ ಮೂಡಿಸಲಾಯಿತು. ಸುರೇಶ ತಲ್ಲೂರ, ವಿನೋದ ಕರಡಿಗುದ್ದಿ ಇತರರಿದ್ದರು.