ಬೆಳಗಾವಿಯಲ್ಲಿ ಶನಿವಾರ ಜರುಗಿದ ಅಂಬಿಗರ ಚೌಡಯ್ಯ ಜಯಂತಿಯನ್ನು ಎಂಎಲ್‌ಸಿ ಸಾಬಣ್ಣ ತಳವಾರ ಉದ್ಘಾಟಿಸಿದರು.
ಬೆಳಗಾವಿ: ಸಮಾಜದಲ್ಲಿನ ಡಾಂಭಿಕ ಜೀವನ, ಮೂಢನಂಬಿಕೆ ಹಾಗೂ ಕಂದಾಚಾರಗಳನ್ನು ನೇರವಾಗಿ ಖಂಡಿಸಿ ವಚನಗಳ ಸತ್ಯದರ್ಶನ ಮಾಡಿಸಿದ ಅಂಬಿಗರ ಚೌಡಯ್ಯ ನಿಷ್ಠುರವಾದಿ ಶರಣರಾಗಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಹೇಳಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯಿಂದ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೇರವಾಗಿ ಖಂಡಿಸುವುದೇ ಕಷ್ಟವಾಗಿದ್ದ ಸಮಯದಲ್ಲಿ ಚೌಡಯ್ಯ ಸೈದ್ಧಾಂತಿಕ ನಿಲುವಿನೊಂದಿಗೆ ನಿಷ್ಠುರವಾಗಿ ಮಾತನಾಡುತ್ತಿದ್ದರು ಹೀಗಾಗಿ ಅವರು ಸತ್ಯನಿಷ್ಠ್ಠ ಶರಣರಾಗಿದ್ದಾರೆ. ಹೀಗಾಗಿಯೇ ಆವರನ್ನು ಮಾತ್ರ ನಿಜ ಶರಣ ಎಂದು ಕರೆಯುತ್ತಾರೆ ಎಂದರು.
ಸಾಹಿತಿ ನಾಗರಾಜ ಗಸ್ತಿ ಮಾತನಾಡಿ, ಅಂಬಿಗರ ಚೌಡಯ್ಯನವರ ವಚನಗಳಲ್ಲಿ ನೇರ ಮತ್ತು ಹರಿತವಾದ ಸಾಹಿತ್ಯವಿದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸಮಾಜದ ಏಳಿಗೆಗೆ ಶ್ರಮಿಸಿದವರು. ಅಂದಿನ ಶತಮಾನದಲ್ಲಿ ಬಾಲ್ಯ ವಿವಾಹ ತಡೆ, ಮಹಿಳೆಯರ ಶೋಷಣೆ ವಿರುದ್ಧ ತಮ್ಮ ವಚನ ಸಾಹಿತ್ಯಗಳ ಮೂಲಕ ನಿರಂತರ ಶ್ರಮಿಸಿದವರು ಎಂದು ಉಪನ್ಯಾಸದಲ್ಲಿ ಹೇಳಿದರು.
ಜಿಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಕೋಳಿ-ಬೆಸ್ತ ಸಮಾಜ ಸಂಘದ ಜಿಲ್ಲಾ ಅಧ್ಯಕ್ಷ ದಿಲೀಪ ಕುರಂದವಾಡೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪಾಲಿಕೆ ಆಯುಕ್ತ ಕಾರ್ತಿಕ ಎಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇತರರಿದ್ದರು.
ಕಾರ್ಯಕ್ರಮಕ್ಕೂ ಮುಂಚೆ ಅಶೋಕ ವೃತ್ತದಿಂದ ಆರಂಭಗೊಂಡ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಚಾಲನೆ ನೀಡಿದರು. ಚನ್ನಮ್ಮ ವೃತ್ತ, ಕೃಷ್ಣದೇವರಾಯ ವೃತ್ತದ ಮೂಲಕ ಮೆರವಣಿಗೆ ಕಾರ್ಯಕ್ರಮದ ಸ್ಥಳ ತಲುಪಿತು.