ಬೆಳಗಾವಿಯ ಲಿಂಗರಾಜ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಕೈರೋಸ್-25’ ಸಾಂಸ್ಕೃತಿಕ ಉತ್ಸವವನ್ನು ಗುರುವಾರ ಮಹಾಂತೇಶ ಕವಟಗಿಮಠ ಉದ್ಘಾಟಿಸಿದರು. ಗಿರಿಜಾ ಹಿರೇಮಠ, ರವಿ ಭಜಂತ್ರಿ ಇದ್ದಾರೆ.
ಬೆಳಗಾವಿ: ವಿದ್ಯಾರ್ಥಿಗಳು ರಾಷ್ಟ್ರದ ಬಹುದೊಡ್ಡ ಆಸ್ತಿ. ಹೀಗಾಗಿ, ಶಿಕ್ಷಣದ ಜತೆಗೆ ಸಂಸ್ಕಾರವಂತರಾಗಿಯೂ ಬೆಳೆಯಬೇಕು. ಸಾಕಷ್ಟು ಓದಿ ಸಂಸ್ಕಾರವಂತರಾಗದಿದ್ದಲ್ಲಿ ಬದುಕಿಗೆ ಅರ್ಥ ಬರುವುದಿಲ್ಲ. ಓದಿನೊಂದಿಗೆ ಜೀವನವನ್ನು ರೂಪಿಸಿದ ತಂದೆ, ತಾಯಿ, ಗುರುಗಳನ್ನು ಸ್ಮರಿಸುವ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಹಾಗೂ ಕೆಎಲ್‌ಇ ಸಂಸ್ಥೆ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವ ‘ಕೈರೋಸ್-25’ ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದು ನೈತಿಕ ಶಿಕ್ಷಣದ ಕೊರತೆಯಿಂದ ಸಮಾಜಪಥ ಬದಲಾಗುತ್ತಿದೆ. ಪ್ರತಿಯೊಬ್ಬರ ಜೀವನಕ್ಕೆ ಸಂಸ್ಕಾರ ಅತ್ಯಗತ್ಯವಾಗಿದೆ ಎಂದರು.
ಯಾವ ಜಾತಿ ಧರ್ಮದಲ್ಲಿ, ಯಾವ ಕುಟುಂಬದಲ್ಲಿ ಹುಟ್ಟಿದ್ದೇವೆ ಎಂಬುದು ಮುಖ್ಯವಲ್ಲ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಅಗಾಧ ಸಾಧನೆ ಮಾಡಿದರೆ ಸಮಾಜಕ್ಕೆ ಆದರ್ಶವಾಗಲು ಸಾಧ್ಯ. ಈಗ ಕೃತಕ ಬುದ್ಧಿಮತ್ತೆ ಕಾಲ ಪ್ರಾರಂಭವಾಗಿದೆ. ಹೊಸ ಸವಾಲುಗಳು ಎದುರಾಗುತ್ತಿವೆ. ಕಾಲದ ಅಗತ್ಯಗಳನ್ನು ತಿಳಿದುಕೊಳ್ಳುವ ಹಂಬಲ, ಆಸಕ್ತ್ತಿ ನಮ್ಮಲ್ಲಿರಬೇಕು. ಇದಕ್ಕೆ ಪೂರಕವಾಗಿ ಕೆಎಲ್‌ಇ ಸಂಸ್ಥೆ ನೀಡುವ ಸೌಕರ್ಯಗಳ ಪ್ರಯೋಜನ ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದರು. ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಮಾತನಾಡಿ, ಡಿಜಿಟಲ್ ಯುಗದಲ್ಲಿ ಪುಸ್ತಕಗಳ ಮಹತ್ವವನ್ನು ವಿದ್ಯಾರ್ಥಿಗಳು ಮರೆಯುತ್ತಿದ್ದಾರೆ. ಪುಸ್ತಕ ಒಂದು ಶಕ್ತಿ ಇದ್ದಂತೆ. ವಿದ್ಯಾರ್ಥಿಗಳು ಮೊಬೈಲ್ ದಾಸರಾಗದೆ ಪುಸ್ತಕಗಳನ್ನು ಕೈಯಲ್ಲಿ ಹಿಡಿಯುವಂತಾಗಬೇಕು ಎಂದರು.
ಲಿಂಗರಾಜ ಪಿಯು ಕಾಲೇಜಿನ ಪ್ರಾಂಶುಪಾಲೆ ಗಿರಿಜಾ ಹಿರೇಮಠ ಸ್ವಾಗತಿಸಿದರು. ಸೃಷ್ಟಿ ಮಲಘಾನ್ ವಂದಿಸಿದರು. ಕೃಷಿಕಾ ಮಿಶ್ರಾ ಮತ್ತು ಸುಮೀತ ಕಾಂಬ್ಳೆ ನಿರೂಪಿಸಿದರು. ಪೃಥ್ವಿ ನರಲೇಕರ ಮತ್ತು ಪ್ರಜ್ವಲ್ ನರಲೇಕರ ಪ್ರಾರ್ಥಿಸಿದರು.
ವಿದ್ಯಾರ್ಥಿ ಸಂಯೋಜಕರಾದ ಹರಿಲಿನ್ ಶಾ, ಸಾನ್ವಿ ಕಲ್ಕುಂದ್ರಿ, ಪದವಿ ಕಾಲೇಜು ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಹಾಗೂ ವಿವಿಧ ಶಾಲೆ, ಕಾಲೇಜುಗಳಿಂದ ಆಗಮಿಸಿದ್ದ 950 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.