ಬೆಳಗಾವಿಯಲ್ಲಿ ಶುಕ್ರವಾರ ಭೀಮಪ್ಪ ಗಡಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಗಯ್ಯ ಹಿರೇಮಠ, ಸಿದ್ದಪ್ಪ ಬಳಿಗಾರ ಇದ್ದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಬಿಡಿಸಿಸಿ)ಖಾಲಿ ಇರುವ ವಿವಿಧ ವೃಂದಗಳ 104 ಹುದ್ದೆಗಳ ನೇರ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆ(ಪ್ರಕಟಣೆ)ಯಲ್ಲಿ ಅನೇಕ ನೂನ್ಯತೆಗಳಿವೆ. ಇದನ್ನು ರದ್ದುಪಡಿಸಿ, ಆಗಿರುವ ನೂನ್ಯತೆ ಸರಿಪಡಿಸಿ ಪುನರ್ ಅಧಿಸೂಚನೆ ಹೊರಡಿಸಬೇಕು ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಭೀಮಪ್ಪ ಗಡಾದ ಆಗ್ರಹಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ನಡೆಸುತ್ತಿರುವ ನೇಮಕಾತಿಯಲ್ಲಿ ವಯೋಮಿತಿ ಮೀರಿರುವ ಹಾಗೂ ಯಾವುದೇ ಪದವಿ ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ದೊರಕಿಸಿಕೊಡಬೇಕಿತ್ತು. ಜತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಂತಹ ಸರ್ಕಾರಿ ಸಂಸ್ಥೆಗಳ ಮೂಲಕ ಲಿಖಿತ ಪರೀಕ್ಷೆ ನಡೆಸಿ ನೇಮಕಾತಿ ಮಾಡಿಕೊಳ್ಳಬೇಕಿತ್ತು. ಆದರೆ, ಇದ್ಯಾವುದನ್ನೂ ಮಾಡಿಲ್ಲ. ನೇಮಕಾತಿ ಅಧಿಸೂಚನೆಯಲ್ಲಿ ಗರಿಷ್ಠ ವಯೋಮಿತಿ ನಿಗದಿಪಡಿಸುವಾಗ ಸರ್ಕಾರದ ಆದೇಶ ಸಂಖ್ಯೆ ಸಿ.ಆ.ಸು.ಇ.262 ಸೇ.ನೆ.ನಿ-2025, 29-01-2026ನ್ನು ಅನುಪಾಲನೆ ಮಾಡಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವ ಮೂಲಕ ಹೊಸ ಅಧಿಸೂಚನೆಗೆ ಆಗ್ರಹಿಸಿ ಈಗಾಗಲೇ ಸಹಕಾರ ಸಚಿವ ಲಕ್ಷ್ಮಣ ಸವದಿ ಮತ್ತು ಸಹಕಾರ ಸಂಘಗಳ ನಿಬಂಧಕರಿಗೂ ಮನವಿ ಸಲ್ಲಿಸಲಾಗಿದೆ ಎಂದರು.
ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಬಿಎ, ಬಿಎಸ್ಸಿ, ಬಿಕಾಂ ಪದವೀಧರರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದು ಸರಿಯಲ್ಲ. ಬಿ.ಇ, ಬಿ.ಟೆಕ್, ಎಂ.ಇ., ಎಂ.ಟೆಕ್ ಹಾಗೂ ಇತರೆ ಪದವಿಗಳನ್ನು ಹೊಂದಿರುವವರೆಲ್ಲರೂ ಅರ್ಜಿ ಸಲ್ಲಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಯಾವುದೇ ಪದವಿ ಪಡೆದಿದ್ದರೂ ಎಲ್ಲರಿಗೂ ಅವಕಾಶ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಲಿಖಿತ ಪರೀಕ್ಷೆ ನಡೆಸಿ, ಪರೀಕ್ಷೆ ಮುಗಿದ ತಕ್ಷಣವೇ ಪ್ರತಿಯೊಬ್ಬ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ವೆಬ್‌ಸೈಟ್‌ಗೆ ಅಪಲೋಡ್ ಮಾಡುವ ಮೂಲಕ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು.
ಸಂಗಯ್ಯ ಹಿರೇಮಠ, ಸಿದ್ದಪ್ಪ ಬಳಿಗಾರ ಸುದ್ದಿಗೋಷ್ಠಿಯಲ್ಲಿದ್ದರು.