ಬೆಳಗಾವಿಯ ಮಚ್ಛೆ ಪಟ್ಟಣದಲ್ಲಿನ ರಾಯಣ್ಣನ ಪ್ರತಿಮೆಗೆ ಅವಮಾನ ಮಾಡಿರುವುದಾಗಿ ಆರೋಪಿಸಿ ಪ್ರತಿಭಟನೆ ಮುಂದಾಗಿದ್ದ ಸ್ಥಳೀಯರನ್ನು ಗುರುವಾರ ತಡರಾತ್ರಿ ಪೊಲೀಸರು ಸಮಾಧಾನಗೊಳಿಸಿದರು.
ಬೆಳಗಾವಿ : ತಾಲೂಕಿನ ಮಚ್ಛೆ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮೇಲೆ ಯಾರೋ ದುಷ್ಕರ್ಮಿಗಳು ಕಪ್ಪು ಮಸಿ ಅಥವಾ ಕಪ್ಪು ಬಣ್ಣವನ್ನು ಎರಚಿದ್ದಾರೆ ಎಂಬ ಸುದ್ದಿ ಗುರುವಾರ ತಡರಾತ್ರಿ ಗೊಂದಲಕ್ಕೆ ಕಾರಣವಾಗಿ, ಸ್ಥಳೀಯರು ಪ್ರತಿಭಟಿಸಿದ ಪ್ರಸಂಗವೂ ನಡೆದಿದೆ. ತಡರಾತ್ರಿಯೇ ಪರಿಸ್ಥಿತಿಯನ್ನು ಹತೋಟಿಗೆ ತಂದಿರುವ ಪೊಲೀಸರು, ಬೆಳಕಾಗುವುದರೊಳಗೆ ಎಲ್ಲವನ್ನೂ ಯಥಾಸ್ಥಿತಿಗೆ ತಂದಿದ್ದಾರೆ.
ಇಲ್ಲಿರುವ ಪ್ರತಿಮೆಗೆ ಈ ಮೊದಲೇ ಕಪ್ಪು ಬಣ್ಣವಿದೆ. ಅದರ ಮೇಲೆಯೇ ಯಾರೋ ಕಪ್ಪು ಬಣ್ಣವೋ ಅಥವಾ ಮಸಿ ಎರಚಿದ್ದಾರೆ ಎನ್ನುವುದು ಗುರುವಾರ ರಾತ್ರಿ ಕೆಲವರ ಗಮನಕ್ಕೆ ಬಂದಿದೆ. ಮೂರ್ತಿಯ ಮೇಲೆ ಅಲ್ಲಲ್ಲಿ, ಸುರಿದಂತೆ ಕಾಣುತ್ತಿದ್ದು, ಇದನ್ನು ಯಾರೂ ದುಷ್ಕರ್ಮಿಗಳು ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ರಾತ್ರಿಯೇ ಪ್ರತಿಭಟನೆ ಆರಂಭಿಸಿದ್ದರು.
ಪರಿಸ್ಥಿತಿಯ ಗಂಭೀರತೆ ಅರಿತ ನಗರ ಪೊಲೀಸ್ ಆಯುಕ್ತ ಭೂಷಣ ಭೋರಸೆ, ಡಿಸಿಪಿ ನಾರಾಯಣ ಬರಮನಿ ಮತ್ತು ಅಧಿಕಾರಿ, ಸಿಬ್ಬಂದಿ ರಾತ್ರಿಯೇ ಸ್ಥಳಕ್ಕಾಗಮಿಸಿ ಸ್ಥಳೀಯರಿಂದ ದೂರು ಪಡೆದುಕೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬಳಿಕ ರಾತ್ರಿಯೇ ಗ್ರಾಮಸ್ಥರೆಲ್ಲ ಸೇರಿ ಪ್ರತಿಮೆಯನ್ನು ತೊಳೆದು ಸ್ವಚ್ಛಗೊಳಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಮಚ್ಛೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೇಲೆ ಏನೋ ಹಾಕಿದ್ದಾರೆಂದು ಕಂಟ್ರೋಲ್ ರೂಮ್‌ಗೆ ರಾತ್ರಿ ದೂರು ಬಂದ ತಕ್ಷಣವೇ, ಸ್ಥಳಕ್ಕೆ ತೆರಳಿ ಪರಿಸ್ಥಿತಿ ಹತೋಟಿಗೆ ತಂದಿದ್ದೇವೆ. ಸ್ಥಳದಲ್ಲೇ ಸಿಸಿಟಿಟಿ ಕ್ಯಾಮರಾವಿದ್ದು, ಈಗಾಗಲೇ 18 ಮತ್ತು 19ರ ದಿನಾಂಕದ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಅದರಲ್ಲಿ ಏನೂ ಕಂಡು ಬಂದಿಲ್ಲ. ಈಗ ಹಿಂದಿನ ಒಂದು ವಾರದ ದೃಶ್ಯಗಳನ್ನು ನಮ್ಮ ಒಂದು ತಂಡ ಪರಿಶೀಲಿಸುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ತಿಳಿಸಿದ್ದಾರೆ.
ಘಟನೆ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ತಿ ಮೇಲೆ ಬಿದ್ದಿರುವ ದ್ರವ್ಯದ ಮಾದರಿಯನ್ನು ಸಂಗ್ರಹಿಸಿ ಎಫ್‌ಎಸ್‌ಎಲ್ ಕಳುಹಿಸಲಾಗಿದೆ. ಮೇಲ್ನೋಟಕ್ಕೆ ಇದು ಮಸಿ ಅಥವಾ ಬಣ್ಣದಂತೆ ಕಾಣುತ್ತಿಲ್ಲ. ಅಂಟು ಅಂಟಿನ ದ್ರವ್ಯ ಇದೆ. ಮೇಲ್ಗಡೆ ಮರವೂ ಇದೆ. ಮರದ ಎಲೆಗಳ ಮೇಲೂ ಈ ಅಂಟಿನ ರೀತಿಯ ದ್ರವ್ಯ ಅಲ್ಲಲ್ಲಿ ಚೆಲ್ಲಿದಂತಿದೆ. ಹೀಗಾಗಿ ಅರಣ್ಯ ಇಲಾಖೆಯವರಿಗೂ ಪರಿಶೀಲಿಸಲು ಹೇಳಿದ್ದೇವೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕವೇ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದಿದ್ದಾರೆ.