ರಾಮದುರ್ಗದಲ್ಲಿ ಏರ್ಪಡಿಸಿದ್ದ ಎಸ್‌ಎಸ್‌ಲ್‌ಸಿ ವಾರ್ಷಿಕ ಪರೀಕ್ಷೆ ಪೂರ್ವ ಸಿದ್ಧತಾ ಸಮನ್ವಯ ಸಮಿತಿ ಸಭೆಯನ್ನು ಪ್ರಕಾಶ ಹೊಳೆಪ್ಪಗೋಳ ಉದ್ಘಾಟಿಸಿದರು. ಬಸವರಾಜ ಐನಾಪುರ, ಸುರೇಂದ್ರ ಕಾಂಬಳೆ, ಶಿವಪ್ರಕಾಶ ಕರಡಿ ಇತರರು ಇದ್ದರು.
- ತಹಸೀಲ್ದಾರ್ ಹೊಳೆಪ್ಪಗೋಳ ಹೇಳಿಕೆ
- ಪೂರ್ವ ತಯಾರಿ ಸಭೆ
ರಾಮದುರ್ಗ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಮಾ.18ರಿಂದ ಆರಂಭವಾಗಲಿದ್ದು, ಎಲ್ಲ ರೀತಿಯ ಸಿದ್ಧತೆ ಹಾಗೂ ಪೂರ್ವ ತಯಾರಿ ನಡೆಸಲಾಗುತ್ತಿದೆ. ಪ್ರೌಢ ಶಿಕ್ಷಣ ಪರೀಕ್ಷಾ ನೀತಿಯಂತೆ ಕಡ್ಡಾಯ ನಿಯಮ ಪಾಲನೆ ಮಾಡಬೇಕೆಂದು ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಹೇಳಿದರು.
ನಗರದ ವಿದ್ಯಾಚೇತನ ಶಾಲಾ ಆವರಣದಲ್ಲಿರುವ ಗುರುಭವನದಲ್ಲಿ ಶುಕ್ರವಾರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿಗಳ ಪೂರ್ವ ಸಿದ್ಧತಾ ಸಮನ್ವಯ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಮಾತನಾಡಿ, ನಕಲು ತಡೆಯಲು ಪರೀಕ್ಷಾ ಕೇಂದ್ರಗಳ ಸುತ್ತಲೂ ಸಿಬ್ಬಂದಿ ನಿಗಾವಹಿಸಿ, ನ್ಯಾಯ ಸಮ್ಮತ ಪರೀಕ್ಷೆ ಜರುಗಿಸುವಂತೆ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರೀಕ್ಷಾ ಆರಂಭದ ದಿನದಂದು ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಲಾಗುವುದು ಎಂದು ಹೇಳಿದರು.
ಪಿಎಸ್‌ಐ ಸವಿತಾ ಮುನ್ಯಾಳ, ಹೆಸ್ಕಾಂ ಎಇಇ ಶಿವಪ್ರಕಾಶ ಕರಡಿ, ಸಾರಿಗೆ ಘಟಕ ವ್ಯವಸ್ಥಾಪಕ ಕೆ.ಬಿ. ಅಮ್ಮಣಗಿ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಐ.ಛಾಯಪ್ಪಗೋಳ, ಜೆ.ಎ.ಶೇಖ, ವಿ.ಎಸ್.ಗಣಾಚಾರಿ, ಎಸ್.ವೈ.ಸನ್ನಿ, ಎಂ.ಎಸ್.ಜಂಗವಾಡ ಇತರರಿದ್ದರು. ಅಕ್ಷರದಾಸೋಹ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ಹಿರೇಮಠ ಸ್ವಾಗತಿಸಿದರು. ಎಸ್.ಪಿ.ಕರಲಿಂಗಪ್ಪನವರ ನಿರೂಪಿಸಿದರು.