ಬೆಳಗಾವಿಯಲ್ಲಿ ಶುಕ್ರವಾರ ನಡೆದ ಆರ್‌ಎಸ್‌ಎಸ್ ಅಖಿಲ ಭಾರತ ಪ್ರಾಂತ ಪ್ರಚಾರಕರ ಸಭೆಯ ಉದ್ಘಾಟನೆಯಲ್ಲಿ ಮೋಹನ ಭಾಗತವ, ದತ್ತಾತ್ರೇಯ ಹೊಸಬಾಳೆ ವೇದಿಕೆಯಲ್ಲಿದ್ದರು.  
ಬೆಳಗಾವಿ

ಆರ್‌ಎಸ್‌ಎಸ್ ಪ್ರಾಂತ ಪ್ರಚಾರಕರ ಸಭೆ ಆರಂಭ

ಬೆಳಗಾವಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಅನಗೋಳದ ಸಂತ ಮೀರಾ ಶಾಲೆಯಲ್ಲಿ ಶುಕ್ರವಾರ ಆರಂಭಗೊಂಡಿತು.
ಭಾನುವಾರದವರೆಗೂ ನಡೆಯಲಿರುವ ಪ್ರಮುಖ ಬೈಠಕ್‌ಗಳ ಉದ್ಘಾಟನಾ ಸಮಾರಂಭದ ಸರಸಂಘಚಾಲಕ ಡಾ. ಮೋಹನ ಭಾಗವತ ಮತ್ತು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ವೇದಿಕೆಯಲ್ಲಿದ್ದರು.
ಎಲ್ಲ ಸಹಕಾರ್ಯವಾಹರು, ಅಖಿಲ ಭಾರತೀಯ ಕಾರ್ಯವಿಭಾಗ ಪ್ರಮುಖರು, ಸಹ ಪ್ರಮುಖರು, ಕಾರ್ಯಕಾರಿಣಿ ಸದಸ್ಯರು, ಕ್ಷೇತ್ರ ಪ್ರಚಾರಕರು, ಸಹ ಕ್ಷೇತ್ರ ಪ್ರಚಾರಕರು ಹಾಗೂ ಎಲ್ಲ 46 ಪ್ರಾಂತಗಳ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು ಮತ್ತು ಸಂಘ ಪ್ರೇರಿತ 32 ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳು ಭಾಗವಹಿಸಿದ್ದಾರೆ.
ಮೂರು ದಿನದ ಸಭೆಯಲ್ಲಿ ಮಾರ್ಚ್ 2026ರ ನಂತರ ಸಂಘದ ವಿವಿಧ ಹಂತಗಳಲ್ಲಿ ನಡೆದ ತರಬೇತಿ ವರ್ಗಗಳ ವರದಿ ಮಂಡನೆ, ಶಾಖಾ ಮಟ್ಟದಲ್ಲಿ ಕಾರ್ಯಯೋಜನೆಯ ಅನುಷ್ಠಾನದ ಚರ್ಚೆ ನಡೆಯಲಿದೆ. ಸಂಘದ ಶತಾಬ್ದಿ ವರ್ಷದ ಅಂಗವಾಗಿ ಶಾಖಾ ಕಾರ್ಯ ವಿಸ್ತರಣೆಯ ಪರಾಮರ್ಶೆ, ಶತಾಬ್ದಿ ವರ್ಷದ ನಿರ್ಧಾರಿತ ಕಾರ್ಯಕ್ರಮಗಳ ಅವಲೋಕನ ಮತ್ತು ಉಳಿದ ಕಾರ್ಯಕ್ರಮಗಳ ರೂಪರೇಷೆಗಳನ್ನು ಸಿದ್ಧಪಡಿಸಲಿದ್ದಾರೆ.
ಮುಂಬರುವ ವರ್ಷದ ಸರಸಂಘಚಾಲಕರ ಪ್ರವಾಸ ಯೋಜನೆ ಸೇರಿದಂತೆ ರಾಷ್ಟ್ರದ ಅನೇಕ ಪ್ರಚಲಿತ ವಿದ್ಯಮಾನಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ. ಸಂಘ ಶತಾಬ್ದಿ ವರ್ಷವೂ 20 ಅಕ್ಟೋಬರ್ 2026ರವರೆಗೆ ನಡೆಯಲಿದ್ದು, ಅಲ್ಲಿಯವರೆಗಿನ ಬಾಕಿ ಕಾರ್ಯಕ್ರಮ ಪ್ರಗತಿಯ ಪರಿಶೀಲನೆಯಾಗಲಿದೆ.