ಬೆಳಗಾವಿ ವಿಮಾನ ನಿಲ್ದಾಣ 
ಬೆಳಗಾವಿ

ವಿಮಾನ ಸೇವೆ ಸ್ಥಗಿತ ವ್ಯಾಪಾರಕ್ಕೆ ಹೊಡೆತ!

ಡಿ.ವಿ.ಕಮ್ಮಾರ
ಬೆಳಗಾವಿ: ದೇಶದ ಸಣ್ಣ ಮತ್ತು ಮಧ್ಯಮ ವಿಮಾನ ನಿಲ್ದಾಣಗಳು ನೀಡುವ ಸೇವೆ ಆಧರಿಸಿ ವಿಮಾನಯಾನ ಪ್ರಾಧಿಕಾರದಿಂದ ನಡೆಸಲಾಗುವ ಗ್ರಾಹಕರ ಸಂತೃಪ್ತಿ ಸೂಚ್ಯಂಕದಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ 11ನೇ ಶ್ರೇಯಾಂಕ ಬಂದಿದ್ದರೂ, ಕ್ರಮೇಣ ವಿಮಾನ ಸೇವೆ ಕಡಿತಗೊಳಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಕಳೆದ ಡಿ.25ರಿಂದ ಬೆಳಗಾವಿ-ಮುಂಬೈ ಮಧ್ಯೆ ಇದ್ದ ವಿಮಾನಯಾನ ಸಂಪರ್ಕ ಕಡಿತಗೊಂಡಿದೆ. ಇದರಿಂದ ಎರಡೇ ವಾರದಲ್ಲಿ ಬೆಳಗಾವಿಯ ಕೈಗಾರಿಕಾ ವಲಯದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಪ್ರಮುಖವಾಗಿ ಮುಂಬೈ ಮೂಲಕವೇ ಇಲ್ಲಿನ ಫೌಂಡ್ರಿ ಕ್ಲಸ್ಟರ್‌ನ ಬಿಡಿಭಾಗಗಳು ದೇಶದ ವಿವಿಧ ಭಾಗದ ಜತೆಗೆ ವಿದೇಶಕ್ಕೂ ರವಾನೆಯಾಗುವ ವ್ಯವಹಾರ ಜಾಲ ಹೊಂದಿದೆ. ಆದರೀಗ ರಫ್ತು ಜಾಲವೇ ಬಂದ್ ಆಗುವ ಆತಂಕ ಸೃಷ್ಟಿಯಾಗಿದೆ.
ಉತ್ತಮ ಸೇವೆಯಲ್ಲಿದ್ದರೂ ಏಕಾಏಕಿಯಾಗಿ ಸೇವೆ ನಿಲ್ಲಿಸಿರುವುದರ ಬಗ್ಗೆ ಚರ್ಚೆ ಆರಂಭಗೊಂಡಿದೆ.
ಸುಲಭ ಸಂಪರ್ಕ:
ಮುಖ್ಯವಾಗಿ ಇಲ್ಲಿಂದ ಮುಂಬೈ ಸಹಿತ ದೇಶದ ವಿವಿಧ ಪಟ್ಟಣಗಳಿಗೆ ವಿಮಾನಯಾನ ಸಂಪರ್ಕವಿರುವ ಕಾರಣಕ್ಕೆ, ಬೇರೆ ಬೇರೆಯ ಕೈಗಾರಿಕೆಗಳ ಜತೆಗೆ ಇಲ್ಲಿಂದ ನೇರ ವ್ಯವಹಾರ ಸಂಪರ್ಕ ವೃದ್ಧಿಯಾಗಿತ್ತು. ಅನೇಕ ಖರೀದಿದಾರರು ಮುಂಬೈ ಮೂಲಕವೇ ಇಲ್ಲಿನ ಕೈಗಾರಿಕೆಗಳಿಗೆ ಬರುತ್ತಿದ್ದರು. ವಿಮಾನ ಸಂಪರ್ಕ ನಿಂತಿದ್ದರಿಂದ ಖರೀದಿಗಾರರು ಬೇರೆ ಕೈಗಾರಿಕಾ ವಲಯದತ್ತ ಮುಖ ಮಾಡುತ್ತಿದ್ದಾರೆ.
ಸದ್ಯ ಗ್ರಾಹಕರ ಸಂತೃಪ್ತಿ ಸೂಚ್ಯಂಕದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ ದೇಶದಲ್ಲೇ 4ನೇ ಸ್ಥಾನದಲ್ಲಿದ್ದರೆ, 11ನೇ ಸ್ಥಾನ ಪಡೆದಿದರುವ ಸಾಂಬ್ರಾ ನಿಲ್ದಾಣಕ್ಕೆ 4.89 ಅಂಕ ಸಿಕ್ಕಿದೆ. ಮೈಸೂರು ನಿಲ್ದಾಣ 15ನೇ ಸ್ಥಾನದಲ್ಲಿದೆ. ಇಂತಹ ಬೆಳವಣಿಗೆ ನಡುವೆ ಮುಂಬೈ ವಿಮಾನ ಸೇವೆ ಕಸಿದುಕೊಂಡಿದ್ದಕ್ಕೆ ಸ್ಥಳೀಯ ಕೈಗಾರಿಕೋದ್ಯಮಿಗಳು ಹೋರಾಟಕ್ಕೆ ಮುಂದಾಗಿದ್ದಾರೆ.
---
"

ಬೆಳಗಾವಿಯಿಂದ ಮುಂಬೈಗೆ ನೇರ ವಿಮಾನ ಸೇವೆ ಆರಂಭಿಸುವಂತೆ ಈಗಾಗಲೇ ಸ್ಟಾರ್ ಏರ್‌ಲೈನ್ಸ್ ಮತ್ತು ಇಂಡಿಗೋ ಕಂಪನಿಗೆ ಪತ್ರ ಬರೆದಿದ್ದು, ಅವರ ಪತ್ರಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಸಕರಾತ್ಮಕವಾಗಿ ಸ್ಪಂದಿಸಿ ಪುನಃ ಸೇವೆ ಆರಂಭಿಸುವ ನಿರೀಕ್ಷೆಯಿದೆ.

"

ವಿಮಾನಯಾನ ಸೇವೆ ರದ್ದುಗೊಳಿಸಿದ್ದರಿಂದ ವ್ಯಾಪಾರ ವಲಯ ಸಂಕಷ್ಟಕ್ಕೆ ಸಿಲುಕಿದೆ. 10 ಸಾವಿರಕ್ಕೂ ಅಧಿಕ ಉದ್ಯೋಗ ಕಡಿತಗೊಳ್ಳುವ ಅಪಾಯವಿದೆ. ಉದ್ಯಮಿಗಳು ತಮ್ಮ ವ್ಯವಹಾರಗಳನ್ನು ಕೊಲ್ಲಾಪುರ ಸೇರಿ ವಿವಿಧೆಡೆ ಸ್ಥಳಾಂತರಿಸಬಹುದು. ಆದ್ದರಿಂದ ಸ್ಥಗಿತಗೊಂಡಿರುವ ಸೇವೆಗಳು ಪುನರಾರಂಭಿಸಬೇಕು.