ಐನಾಪುರದಲ್ಲಿ ಗಣ್ಯರು ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಕರಪತ್ರ ಬಿಡುಗಡೆ ಮಾಡಿದರು. ಬನಸಿದ್ಧ ಮಹಾರಾಜ, ದಾದಾಸಾಬ ಜಂತೆನ್ನವರ, ಸಂತೋಷ ಪಾಟೀಲ, ಅರುಣ ಗಾಣಿಗೇರ ಇತರರಿದ್ದರು.
- ಕೃಷಿಮೇಳ ಸಿದ್ಧತೆಗೆ ಭೂಮಿಪೂಜೆ
- ಕರಪತ್ರ ಬಿಡುಗಡೆ
- ವಿವಿಧ ಧಾರ್ಮಿಕ ಕೈಂಕರ್ಯ, ಶರ್ಯತ್ತು ಆಯೋಜನೆ
ಐನಾಪುರ: ಪಟ್ಟಣದಲ್ಲಿ ಜ.೧೪ರಿಂದ ೧೮ರವರೆಗೆ ಸಿದ್ಧೇಶ್ವರ ದೇವರ ಜಾತ್ರೆ ಜರುಗಲಿದ್ದು, ಈ ನಿಮಿತ್ತ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಜಾತ್ರಾ ಕಮಿಟಿ ಉಪಾಧ್ಯಕ್ಷ ರಾಜುಗೌಡ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಮೈದಾನದಲ್ಲಿ ಕೃಷಿಮೇಳದ ಸಿದ್ಧತೆಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ರೈತರ ಸಹಕಾರದಿಂದ ಹಲವು ವರ್ಷಗಳಿಂದ ಬೃಹತ್ ಕೃಷಿ ಪ್ರದರ್ಶನ ಹಮ್ಮಿಕೊಂಡು ಬರಲಾಗುತ್ತಿದೆ. ಮೇಳದಲ್ಲಿ ೨೦೦ಕ್ಕೂ ಹೆಚ್ಚು ಮಳಿಗೆಗಳು ತೆರೆಯಲಿದ್ದು, ವಿವಿಧ ರಾಜ್ಯ, ಜಿಲ್ಲೆಗಳ ಕೃಷಿ ಸಂಬಂಧಿತ ಕಂಪನಿಗಳು ಪಾಲ್ಗೊಳ್ಳಲಿವೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಅರುಣ ಗಾಣಗೇರ, ಸಂಜು ಕುಚನೂರೆ ಮಾತನಾಡಿ, ಕೃಷಿ ಯಂತ್ರಗಳು, ಹೊಸ ತಳಿಗಳು, ಲಾಭದಾಯಕ ಬೆಳೆಗಳ ಪರಿಷ್ಕರಣೆ, ಸಲಕರಣೆ ಸೇರಿ ವಿವಿಧ ಮಾಹಿತಿ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಬೃಹತ್ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹತ್ತೂರಿನ ಬನಸಿದ್ಧ ಮಹಾರಾಜರು, ಜಾತ್ರಾ ಕಮಿಟಿ ಅಧ್ಯಕ್ಷ ದಾದಾಸಾಬ ಜಂತೆನ್ನವರ, ಉಪಾಧ್ಯಕ್ಷ ಸಂತೋಷ ಪಾಟೀಲ, ಮುಖಂಡರಾದ ದಾದಾಗೌಡ ಪಾಟೀಲ, ಸುಭಾಸಗೌಡ ಪಾಟೀಲ,
ಚಮನ್‌ರಾವ್ ಪಾಟೀಲ, ಹರ್ಷವರ್ಧನ ಪಾಟೀಲ, ತಮ್ಮಣ್ಣ ಪಾರಶೆಟ್ಟಿ, ಕುಮಾರ ಅಪರಾಜ, ತಾತ್ಯಾಸಾಹೇಬ ಕೋರ್ಬು, ಅಣ್ಣಾಸಾಹೇಬ ಡೂಗನವರ, ಪ್ರಕಾಶ ಕೋರ್ಬು, ಅಣ್ಣಾಸಾಹೇಬ ಜಾಧವ, ಸುರೇಶ ಅಡಿಸೇರಿ, ಸುರೇಶ ಗಾಣಿಗೇರ, ಅರವಿಂದ ಕಾರ್ಚಿ, ಸುದರ್ಶನ ಜಂತೆನ್ನವರ, ಸಂಜೀವ ಕುಸನಾಳೆ, ಬಾಹುಬಲಿ ಕುಸನಾಳೆ, ಅಮಿತ ಡೂಗನವರ, ವಿಶ್ವನಾಥ ನಾಮದಾರ, ರಾಜು ಖವಟಕೊಪ, ಬಾಬು ಶೇಡಶ್ಯಾಳೆ, ಅಮಗೊಂಡ ಅಡಿಸೇರಿ ಇತರರಿದ್ದರು.
ಕಾರ್ಯಕ್ರಮಗಳು
ಜ.೧೪ರಂದು ಸಂಜೆ ೬ ಗಂಟೆಗೆ ೧೧ ಗ್ರಾಮಗಳ ದೇವರ ಪಲ್ಲಕ್ಕಿ ಭೇಟಿ ಕಾರ್ಯಕ್ರಮ. ಜ.೧೫ರಂದು ಶ್ವಾನ ಪ್ರದರ್ಶನ, ಜೋಡು ಕುದುರೆ ಗಾಡಿ ಶರ್ಯತ್ತು, ಜ.೧೬ರಂದು ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ, ಗುಂಡುಕಲ್ಲು ಎತ್ತುವ ಸ್ಪರ್ಧೆ, ಜ.೧೭ರಂದು ಒಂದು ಕುದುರೆ ಒಂದು ಎತ್ತಿನಗಾಡಿ ಶರ್ಯತ್ತು, ಟಗರು ಕಾದಾಟ, ಜ.೧೮ರಂದು ಜೋಡು ಎತ್ತಿನ ಗಾಡಿ ಶರ್ಯತ್ತು ಹಾಗೂ ಉತ್ತಮ ತಳಿ ದನಗಳಿಗೆ ಬಹುಮಾನ ವಿತರಣೆ ಮತ್ತು ಜಾನುವಾರು ಜಾತ್ರೆ ಇರಲಿದೆ.