ಬೆಳಗಾವಿಯಲ್ಲಿ ಭಾನುವಾರ ಜರುಗಿದ ಅನುದಾನಿತ ಶಾಲಾ-ಕಾಲೇಜ್ ನೌಕರರ ಸಭೆಯಲ್ಲಿ ರಾಮು ಗುಗವಾಡ, ಬಸವರಾಜ ಹಳಿಂಗಳಿ, ಮುತ್ತುರಾಜ ಮತ್ತಿಕೊಪ್ಪ, ತಿಮ್ಮಪ್ಪ ಗಿರೆಪ್ಪನವರ, ರಾಜು ಪಾಟೀಲ ಇತರರಿದ್ದರು.
ಬೆಳಗಾವಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳ ನಿರ್ದೆಶನದಂತೆ ಸರ್ಕಾರ ತೆಗೆದುಕೊಳ್ಳುತ್ತಿರುವ ದುಡುಕಿನ ನಿರ್ಧಾರಗಳು ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದು, ಅನುದಾನಿತ ಶಾಲಾ-ಕಾಲೇಜ್ ನೌಕರರು ಸಂಘಟಿತರಾಗಿ ಇದರ ಬಗ್ಗೆ ಪ್ರಶ್ನಿಸದಿದ್ದಲ್ಲಿ ಮುಂದೆ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಗೌರವಾಧ್ಯಕ್ಷ ರಾಮು ಗುಗವಾಡ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಜರುಗಿದ ಅಖಿಲ ಕರ್ನಾಟಕ ಅನುದಾನಿತ ಶಾಲಾ-ಕಾಲೇಜ್ ನೌಕರರ ಸಂಘದ ಬೆಳಗಾವಿ ತಾಲೂಕು ಗ್ರಾಮೀಣ ಘಟಕದ ಪದಾಧಿಕಾರಿಗಳ ಆಯ್ಕೆ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಮುಚ್ಚುವ ಷಡ್ಯಂತ್ರ ತೆರೆಮರೆಯಲ್ಲಿ ನಡೆಯುತ್ತಿದೆ. ಇದರ ಬಗ್ಗೆ ನೌಕರರು ಜಾಗೃತರಾಗಬೇಕು ಎಂದರು.
ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹಳಿಂಗಳಿ ಮಾತನಾಡಿ, ಹಳೆಯ ನಿಶ್ಚಿತ ಪಿಂಚಣಿ ಜಾರಿ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಶೀಘ್ರ ದೊಡ್ಡ ಮಟ್ಟದ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಗೌರವಾಧ್ಯಕ್ಷ ಮುತ್ತುರಾಜ ಮತ್ತಿಕೊಪ್ಪ, ಉಪಾಧ್ಯಕ್ಷ ತಿಮ್ಮಪ್ಪ ಗಿರೆಪ್ಪನವರ, ಬಾಳಗೌಡ ಕರಲಿಂಗನವರ, ಶಂಕರ ಕಳಸಣ್ಣವರ, ಬೆಳಗಾವಿ ಗ್ರಾಮೀಣ ಘಟಕದ ನೂತನ ಅಧ್ಯಕ್ಷ ರಾಜು ಪಾಟೀಲ, ಗಣಪತಿ ಮಾಸ್ತಮರಡಿ, ರಾಜು ಮುದ್ದೆವ್ವಗೋಳ, ಲಗಮಪ್ಪ ಹೊನ್ನಪ್ಪಗೋಳ, ಶಂಕರ ಎಂಟೆತ್ತಿನವರ ಇತರರಿದ್ದರು.
ಎಸ್.ಎ.ಮಾಮೂಲದಾರ ನಿರೂಪಿಸಿ ಸ್ವಾಗತಿಸಿದರು. ಪದ್ಮಾವತಿ ಜೋಶಿ ವಂದಿಸಿದರು.