ಎಐ ಚಿತ್ರ 
ಬೆಳಗಾವಿ

ಸಂಚಾರ ನಿಯಮ ಪಾಲನೆ ಮೇಲೆ ಎಐ ನಿಗಾ

ಡಿ.ವಿ.ಕಮ್ಮಾರ ಬೆಳಗಾವಿ
ಈ ವರ್ಷವೂ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿಲ್ಲ. ಕಳೆದ ವರ್ಷ ಹಾಗೂ ಈ ವರ್ಷದ ಆರು ತಿಂಗಳಲ್ಲಿ ಆಗಿರುವ ಅಪಘಾತ ಹಾಗೂ ಸಾವು-ನೋವಿನ ದತ್ತಾಂಶ ಆಧರಿಸಿ ವಾಹನ ಸವಾರರ ನಿಯಮ ಪಾಲನೆ ಮೇಲೆ ಎಐ ಕ್ಯಾಮರಾ ಮೂಲಕ ನಿಗಾ ಇಡಲು ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ.
ಬೆಳಗಾವಿ ನಗರ ಹೊರತುಪಡಿಸಿ ಜಿಲ್ಲಾದ್ಯಂತ ಒಟ್ಟು 145 ಸ್ಥಳಗಳಲ್ಲಿ 290 ಎಐ ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಿದ್ದು, ಮೊದಲ ಹಂತದಲ್ಲಿ 15 ಸ್ಥಳಗಳಲ್ಲಿ 30 ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಇವುಗಳ ಮೂಲಕ ಈಗಾಗಲೇ ಸಂಚಾರ ನಿಯಮ ಉಲ್ಲಂಘಿಸಿದ ಸಾವಿರಕ್ಕೂ ಹೆಚ್ಚು ವಾಹನ ಮಾಲೀಕರಿಗೆ ಸ್ವಯಂಚಾಲಿತ ನೋಟಿಸ್ ಜಾರಿಯಾಗುತ್ತಿವೆ.

ದಂಡ ವಸೂಲಿ ಮೂಲ ಉದ್ದೇಶವಲ್ಲ. ನಮ್ಮ ಮೇಲೆ ಕ್ಯಾಮರಾ ನಿಗಾ ಇದೆ ಎಂಬ ಭಯಕ್ಕಾದರೂ ಜನ ಸಂಚಾರ ನಿಯಮ ಪಾಲಿಸಿದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗಬಹುದು. ಜಿಲ್ಲೆಯಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ 900 ಜನ ಸಾವಿಗೀಡಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ವಾಹನ ಸವಾರರೂ ನಿಯಮ ಪಾಲನೆಗೆ ಮುಂದಾಗಬೇಕು.

— ಕೆ.ರಾಮರಾಜನ್ ಎಸ್ಪಿ


2025ರಲ್ಲಿ ಒಟ್ಟು 2,052 ರಸ್ತೆ ಅಪಘಾತ ಸಂಭವಿಸಿ, 805 ಜನ ಮೃತಪಟ್ಟಿದ್ದಾರೆ. ಈ ವರ್ಷ ಜೂ.8ರವರೆಗೆ 1,017 ಅಪಘಾತಗಳಾಗಿ 367 ಜನ ಸಾವಿಗೀಡಾಗಿದ್ದಾರೆ. ಈ ಅಪಘಾತ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಗ್ರಾಮೀಣ ರಸ್ತೆಗಳಲ್ಲೇ ಹೆಚ್ಚು ಅಪಘಾತ ಸಂಭವಿಸುತ್ತಿವೆ. ಹಾಗಾಗಿ, ಹಳ್ಳಿ ರಸ್ತೆಯಲ್ಲೂ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಬೇಕು. ಏಕಮುಖ ಸಂಚಾರ ನಿಯಮ ಪಾಲಿಸಬೇಕು. ಅಜಾಗರೂಕ ಚಾಲನೆ ಮಾಡಬಾರದು ಎಂಬ ಉದ್ದೇಶದಿಂದ ಎಐ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಎರಡನೇ ಹಂತದಲ್ಲಿ 30 ಸ್ಥಳಗಳಲ್ಲಿ 60 ಕ್ಯಾಮರಾ ಅಳವಡಿಸಲು ಯೋಜಿಸಲಾಗಿದೆ. 200 ಕ್ಯಾಮರಾ ಅಳವಡಿಸಲು ಅನುದಾನಕ್ಕಾಗಿ ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸಲಾಗಿದೆ.
ಮೂರು ಹಂತಗಳಲ್ಲಿ ಒಟ್ಟು 290 ಕ್ಯಾಮರಾ ಅಳವಡಿಸಿ, ಸಂಚಾರದ ಮೇಲೆ ನಿಗಾ ಇಡಲಿದ್ದು, ಇದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ ಈಗಾಗಲೇ 30 ಕ್ಯಾಮರಾಗಳಿಂದಲೇ ನಿತ್ಯ ಸಾವಿರಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಕಂಡು ಬರುತ್ತಿದ್ದು, ಗರಿಷ್ಠ 4,000ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ.
⚠️

ಅಪರಾಧಿಗಳ ಮೇಲೂ ಕಣ್ಣುಎಐ ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮರಾಗಳು ಸಂಚಾರ ನಿಯಮ ಉಲ್ಲಂಘನೆ ಮೇಲೆ ಕಣ್ಣಿಡುವುದರ ಜತೆಗೆ ಅಪರಾಧ ಚಟುವಟಿಕೆಗಳ ಮೇಲೂ ನಿಗಾ ಇಡಲಿವೆ. ಕಳ್ಳರ ಚಲನವಲನ, ಅಪರಾಧ ಹಿನ್ನೆಲೆಯುಳ್ಳವರು ತಪ್ಪಿಸಿಕೊಳ್ಳುವ ವೇಳೆಯಲ್ಲಿ ನಿಗಾ ಇಟ್ಟು ಮಾಹಿತಿ ರವಾನಿಸಲಿವೆ. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಅನ್ಯ ರಾಜ್ಯದ ಕಳ್ಳರು ಆಗಾಗ ಜಿಲ್ಲೆಯೊಳಗೆ ಬಂದು ಕಳವು ಮಾಡಿ ಪರಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಆಯಕಟ್ಟಿನ ಜಾಗಗಳಲ್ಲೂ ಎಐ ಕ್ಯಾಮರಾಗಳು ಹದ್ದಿನ ಕಣ್ಣಿಡಲಿವೆ. ಇದಕ್ಕಾಗಿ ಎಸ್ಪಿ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ.


ಅಪಘಾತಗಳ ಮಾಹಿತಿ2025
2026 (ಜೂ.8ರವರೆಗೆ)
ಭೀಕರ ಅಪಘಾತ
759353
ಸಾಮಾನ್ಯ ಅಪಘಾತ
1,293 664
ಒಟ್ಟು ಅಪಘಾತ
2,052 1,017
ಸಾವು
805
367
ಗಾಯಾಳುಗಳು 3,058 1,337