ಬೆಳಗಾವಿ ಜಿಲ್ಲೆಯ ಸವದತ್ತಿ ಮತ್ತು ರಾಮದುರ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಜಮೀನುಗಳಿಗೆ ಮಂಗಳವಾರ ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಎಚ್.ಡಿ.ಕೋಳೇಕರ್ ನೇತೃತ್ವದ ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಿ ರೋಗ ತಗುಲಿರುವ ಬೆಳೆಗಳ ಪರಿಶೀಲಿಸಿದರು.
ಬೆಳಗಾವಿ: ಮಳೆಯ ಅಭಾವದ ಜತೆಗೆ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯಿಂದ ಹೂ ಬಿಡುವ ಹಾಗೂ ಕಾಯಿ ಕಟ್ಟುವ ಹಂತದಲ್ಲಿ ರೋಗಬಾಧೆಯ ಅಪಾಯಕ್ಕೆ ಸಿಲುಕಿರುವ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ರೈತರ ಬೆನ್ನಿಗೆ ನಿಂತಕೃಷಿ ಇಲಾಖೆ.
ಹೌದು. ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣ ಆಗದಿರುವ ಹಿನ್ನೆಲೆ ಜಿಲ್ಲೆಯ್ಯದ್ಯಂತ 6.53 ಲಕ್ಷ ಹೆಕ್ಟೇರ್ ಬಿತ್ತನೆಯಾಗಿರುವ ಹತ್ತಿ, ಸೋಯಾಅವರೆ, ಶೇಂಗಾ, ಮೆಕ್ಕೆಜೋಳ, ಸೊಯಾಬಿನ್ ಸೇರಿ ವಿವಿಧ ಬೆಳೆಗಳು ಬೆಳೆದ ಮಣ್ಣಿನಲ್ಲಿ ನೀರಿನ ತೇವಾಂಶ ಕ್ಷೀಣಿಸಿರುವ ಪರಿಣಾಮ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದೆ. ಹಗಲಿನಲ್ಲಿ ಒಮ್ಮೆ ಬಿಸಿಲು ಮತ್ತೊಮ್ಮೆ ತಂಪಾದ ವಾತಾವಾರಣದಿಂದಾಗಿ ತೇವಾಂಶದ ಏರಿಳಿತ ಆಗುತ್ತಿದ್ದು, ಶಿಲೀಂಧ್ರ,ಕೀಟಗಳ ಬಾಧೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಕೃಷಿ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಜಾಗೃತಿ ನೀಡುತ್ತಿದ್ದಾರೆ.
ಸದ್ಯ ಸೋಯಾಅವರೆ ಹೂವಾಡುವ ಹಂತದಲ್ಲಿದೆ. ಈ ಬೆಳೆಗೆ ಅಲ್ಲಲ್ಲಿ ಹಸಿರುಕಾಯಿ ಕೊರಕ ಬಾಧೆ, ಹೆಸರು ಮತ್ತು ಉದ್ದು ಬೆಳೆಯಲ್ಲಿ ಅಲ್ಲಲ್ಲಿ ಕಬ್ಬಿಣ ಮತ್ತು ಮಾಗ್ನೇಯಂ ಪೋಷಕಾಂಶ ಕೊರತೆಯಿಂದ ತಿಳಿಹಳದಿ ಎಲೆಗಳು, ಶೇಂಗಾ ಬೆಳೆಯಲ್ಲಿ ಅಲ್ಲಲ್ಲಿ ಕತ್ತುಕೊಳೆರೋಗ, ಹತ್ತಿ ಬೆಳೆಯಲ್ಲಿ ರಸ ಹೀರುವ ಕೀಟಗಳು ಜಿಗಿ ಹುಳು, ಥ್ರಿಪ್ಸ ನುಸಿ ಮತ್ತು ಹೇಣುಗಳು ಹೀಗೆ ವಿವಿಧ ರೋಗಗಳು ಕಂಡು ಬಂದಿದೆ. ಎಲ್ಲ ಬೆಳೆಗಳು ಬೆಳೆ 30 ರಿಂದ 50 ದಿನಗಳ ಬೆಳೆಯಿದ್ದು ರೋಗ ಬಾದೆಯಿಂದಾಗಿ ಬೆಳೆಗಳ ಗುಣಮಟ್ಟ ಮತ್ತು ಇಳುವರಿ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕ ರೈತರಲ್ಲಿ ಮನೆ ಮಾಡಿದೆ.
ಈಗಾಗಲೇ ಬೆಳಗಾವಿ, ಖಾನಾಪುರ, ಹುಕ್ಕೇರಿ, ಗೋಕಾಕ, ಚಿಕ್ಕೋಡಿ, ಮೂಡಲಗಿ ಸೇರಿ ವಿವಿಧ ತಾಲೂಕಿನಲ್ಲಿ ಈರುಳ್ಳಿ, ಟೊಮ್ಯಾಟೊ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಬೆಂಡೆಕಾಯಿ, ಚವಳಿಕಾಯಿ ಹಾಗೂ ಹೂ ಬೆಳೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಈ ನಡುವೆ ರೈತರು ಭೂಮಿಯಲ್ಲಿ ಬೆಳೆದು ನಿಂತಿರುವ ಬೆಳೆಗಳನ್ನು ಸಂರಕ್ಷಿಸಲು ಸಾವಿರಾರೂ ವೆಚ್ಚ ಮಾಡಿ ಔಷಧಿ ಸಂಪಡಣೆ ಮಾಡುತ್ತಿದ್ದಾರೆ. ಆದರೆ, ರೋಗಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಹವಾಮಾನ ವೈಪರಿತ್ಯ, ತುಂತುರು ಮಳೆಯಿಂದಾಗಿ ಬೆಳೆಯಲ್ಲಿ ಕಬ್ಬಿಣ.ಮಾಗ್ನೇಯಂ ಪೋಷಕಾಂಶ ಕೊರತೆಯಿಂದ ಎಲೆಗಳು ತಿಳಿಹಳದಿಗೆ ತಿರುತ್ತಿವೆ. ಹಳದಿ ನಂಜು ರೋಗ ಹೆಚ್ಚಾಗಿ ಕಂಡು ಬರುತ್ತಿರುವುದೇ ರೈತರು ತೀವ್ರ ಆತಂಕಕ್ಕೆ ಒಳಗಾಗಲು ಪ್ರಮುಖ ಕಾರಣ ಎನ್ನಲಾಗಿದೆ.
...............................................
ಮಳೆ ಕೊರತೆ, ಹವಾಮಾನ ವೈಪರಿತ್ಯದಿಂದಾಗಿ ಜಿಲ್ಲೆಯ್ಯದ್ಯಂತ ಕೆಲ ಬೆಳೆಗಳಲ್ಲಿ ರೋಗಗಳು ಕಂಡು ಬಂದಿದ್ದು, ಜಮೀನುಗಳಿಗೆ ಭೇಟಿ ನೀಡಿ ರೈತರಲ್ಲಿ ಮುನ್ನೆಚ್ಚರಿಕೆ ಕ್ರಮದ ಕುರಿತು ಅರಿವು ಮೂಡಿಸಲಾಗುತ್ತಿದೆ. ಕೀಟನಾಶಕಗಳ ಬಳಕೆಯಲ್ಲಿ ಸುರಕ್ಷತೆ ಕುರಿತು ಕರ ಪತ್ರಗಳ ವಿತರಣೆ ಜತೆಗೆ ಜಾಗೃತಿ ಅಭಿಯಾನ ಆರಂಭಿಸಲಾಗಿದೆ.
-ಡಾ.ಎಚ್.ಡಿ.ಕೋಳೇಕರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ