ಬೆಳಗಾವಿ ನಗರದ ಕಣಬರ್ಗಿ ಸ್ಕೀಂ-61ರರಲ್ಲಿ 24 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಐಟಿ ಪಾರ್ಕ್
ಬೆಳಗಾವಿ :ಬೆಂಗಳೂರು ಮಹಾನಗರ ಹೊರತುಪಡಿಸಿ ಅತಿ ವೇಗವಾಗಿ ಬೆಳೆಯುತ್ತಿರುವ ಬೆಳಗಾವಿ ನಗರ ಇದೀಗ ಕೈಗಾರಿಕಾ ಬೆಳವಣಿಗೆ ಜತೆಗೆ ಮಾಹಿತಿ ತಂತ್ರಜ್ಞಾನ (ಐಟಿ), ಜೈವಿಕ ತಂತ್ರಜ್ಞಾನ (ಬಿಟಿ) ಕ್ಷೇತ್ರದಲ್ಲೂ ಹೊಸ ಹೆಜ್ಜೆ ಇಡಲು ಸಜ್ಜಾಗಿದೆ.!
ಹೌದು. ಕರ್ನಾಟಕ-ಮಹಾರಾಷ್ಟ್ರ-ಗೋವಾ ರಾಜ್ಯಗಳ ಸಂಪರ್ಕದ ಪ್ರಮುಖ ಕೇಂದ್ರವಾಗಿರುವ ಬೆಳಗಾವಿಯ ಭೌಗೋಳಿಕ ಸ್ಥಾನಮಾನವನ್ನು ಬಳಸಿಕೊಂಡು ನೆರೆಯ ರಾಜ್ಯಗಳ ಕಂಪನಿಗಳ ಆಕರ್ಷಿಸುವ ಉದ್ದೇಶ ಹಾಗೂ ತಾಂತ್ರಿಕ ಶಿಕ್ಷಣ ಪದವಿಧರಿಗೆ ಸ್ಥಳೀಯ ಮಟ್ಟದಲ್ಲಿಯೇ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಣಬರ್ಗಿ ಸ್ಕೀಂ-61ರರಲ್ಲಿ 24 ಎಕರೆ ಪ್ರದೇಶದಲ್ಲಿ ಏಳು ಟವರ್‌ಗಳ ಬೃಹತ್ ಐಟಿ ಪಾರ್ಕ್ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಮೂರು ಹಂತಗಳಲ್ಲಿ ಕೈಗೆತ್ತಿಕೊಳ್ಳಲಿರುವ ಯೋಜನೆಗೆ ಬರೋಬ್ಬರಿ 1,223 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ದಕ್ಷಿಣ ಭಾರತದಲ್ಲಿಯೇ ಅಧಿಕ ಪ್ರಮಾಣದಲ್ಲಿ ಬೆಂಗಳೂರು, ಮುಂಬೈ, ಪುಣೆ, ಹೈದಾರಾಬದ್‌ನಂತಹ ಮಹಾನಗರಗಳಲ್ಲಿ ಐಟಿ, ಬಿಟಿ ಆಧಾರಿತ ಸೇವಾ ಕ್ಷೇತ್ರಗಳಲ್ಲಿ ದೇಶ, ವಿದೇಶಗಳಲ್ಲಿನ 200ಕ್ಕೂ ಅಧಿಕ ಬೃಹತ್, ಸಣ್ಣ ಪ್ರಮಾಣದಲ್ಲಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಈ ಕಂಪನಿಗಳಲ್ಲಿ ಲಕ್ಷಾಂತರ ಜನರು ಉದ್ಯೋಗ ಅವಕಾಶ ಪಡೆದುಕೊಂಡಿದ್ದಾರೆ. ಇದೇ ಮಾದರಿಯ ತಂತ್ರಜ್ಞಾನ ಆಧಾರಿತ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸಲಾಗುತ್ತಿದೆ.
ದೇಶದ ವಿವಿಧ ಭಾಗಗಳ ನೇರ ಸಂಪರ್ಕ ಹೊಂದಿರುವ, ಆಟೋಮೊಬೈಲ್ ಬಿಡಿ ಭಾಗಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬೆಳಗಾವಿ ಮಹಾನಗರ ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳನ್ನು, ಐಟಿ, ಬಿಟಿ, ಎಐ ತಂತ್ರಜ್ಞಾನ ಆಧಾರಿತ ಇಂಜಿನಿಯರಿಂಗ್ , ಡಿಪ್ಲೋಮಾ ಕಾಲೇಜುಗಳ ಸೌಲಭ್ಯ ಒಳಗೊಂಡಿದೆ. ಅಲ್ಲದೆ, ಉತ್ಪಾದನೆ ಕ್ಷೇತ್ರದ ದೈತ್ಯ ಕಂಪನಿಗಳ ಶಾಖೆಗಳು ಕೂಡ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನೆಲೆ ಬೆಳಗಾವಿಯಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಐಟಿ ಪಾರ್ಕ್‌ನಲ್ಲಿ ವಿಪ್ರೋ, ಇನ್ಪೋಸೀಸ್ ಸೇರಿ 80ಕ್ಕೂ ಅಧಿಕ ಐಟಿ, ಬಿಟಿ ಕಂಪನಿಗಳು ಸಾವಿರಾರೂ ಕೋಟಿ ರೂ. ಹೂಡಿಕೆಗೆ ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಸರ್ಕಾರವು ವಿಶೇಷ ಆದ್ಯತೆ ನೀಡುತ್ತಿದೆ. ಜತೆಗೆ ಮಾಸ್ಟರ್ ಪ್ಲಾನ್ ಯೋಜನೆ ಅನುಷ್ಠಾನಕ್ಕೆ 1ಸಾವಿರಕ್ಕೂ ಅಧಿಕ ಎಕರೆ ಭೂಮಿ ಗುರುತಿಸುವ ಪ್ರಕ್ರಿಯೇಗೆ ಕೈ ಹಾಕಿದೆ ಎನ್ನುತ್ತಾರೆ ನಗರಾಭಿವೃದ್ಧಿ, ಕೈಗಾರಿಕೆ ಇಲಾಖೆ ಅಧಿಕಾರಿಗಳು.
ಮಹಾ-ಗೋವಾಕ್ಕೆ ಟೆಕ್ ಗೇಟ್‌ವೇ?
ನೆರೆಯ ಮುಂಬೈ, ಪುಣೆ ಮಾದರಿಯ ದೊಡ್ಡ ನಗರಗಳಲ್ಲಿ ಹೆಚ್ಚುತ್ತಿರುವ ವೆಚ್ಚಕ್ಕೆ ಪರ್ಯಾಯವಾಗಿ ಮಹಾರಾಷ್ಟ್ರದ ಕಂಪನಿಗಳಿಗೆ ಬೆಳಗಾವಿ ಸಮೀಪದ ಕಡಿಮೆ ವೆಚ್ಚದ ಟೆಕ್ ಪಾರ್ಕ್ ಆಗಲಿದೆ. ನೆರೆಯ ರಾಜ್ಯಗಳಲ್ಲಿರುವ ಬೃಹತ್ ಐಟಿ ಕಂಪನಿಗಳನ್ನೂ ಬೆಳಗಾವಿ ಸೆಳೆಯುವ ದೊಡ್ಡ ಕನಸು ಈ ಯೋಜನೆ ಹಿಂದೆ ಅಡಗಿದೆ. ಹೀಗಾಗಿ ಬೆಳಗಾವಿ ಮಹಾ-ಗೋವಾಕ್ಕೆ ಟೆಕ್ ಗೇಟ್‌ವೇ ಎಂದು ಕರೆಯಲಾಗುತ್ತಿದೆ.
..........................
ಮೂರು ಹಂತಗಳಲ್ಲಿ ಐಟಿ ಪಾರ್ಕ್ ನಿರ್ಮಾಣ
ಹಂತ ನಿರ್ಮಾಣ ವೆಚ್ಚ (ಕೋಟಿ ರೂ.)
ಎರಡನೇ 14.29 ಲಕ್ಷ ಚ.ಅಡಿ 600
ಮೂರನೇ 13.77 ಲಕ್ಷ ಚ.ಅಡಿ 548
ಒಟ್ಟು 29.86ಲಕ್ಷ ಚ.ಅಡಿ 1,223
........................................
ಬೆಳಗಾವಿಯಲ್ಲಿ 24 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದ್ದು, ಐಟಿ ಪಾರ್ಕ್‌ಗೆ ಅಗತ್ಯವಿರುವ ಭೂಮಿ, ಮೂಲಸೌಕರ್ಯ ಸಿದ್ದಪಡಿಸಲಾಗಿದೆ. ಮೂರು ಹಂತದಲ್ಲಿ 1,223 ಕೋಟಿ ರೂ.ವೆಚ್ಚ ಆಗಲಿದೆ. ಈ ಯೋಜನೆ ಪೂರ್ಣಗೊಂಡರೆ ಬೆಳಗಾವಿಯಲ್ಲಿ ಐಟಿ, ಸಂಬಂಧಿತ ಸೇವಾ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಲಿವೆ.
- ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ