ನಗರದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 135ನೇ ಜನ್ಮ‌ ದಿನಾಚರಣೆ ಕಾರ್ಯಕ್ರಮ 
ಬೆಳಗಾವಿ

ಡಾ.ಬಿ.ಆರ್. ಅಂಬೇಡ್ಕರ್ ಜೀವನ ಸಿದ್ಧಾಂತ ಅಳವಡಿಸಿಕೊಳ್ಳಿ

ಬೆಳಗಾವಿ: ಡಾ.ಬಿ.ಆರ್. ಅಂಬೇಡ್ಕರ್ ಜೀವನದ ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಬಡತನವು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಇವರ ಜೀವನವೇ ಸ್ಪಷ್ಟಪಡಿಸುತ್ತದೆ ಎಂದು ಉಪ ಮಹಾಪೌರರಾದ ಹನುಮಂತ‌ ಕೊಂಗಾಲಿ ಅವರು ನುಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಡಾ.ಬಿ.ಆರ್.ಅಂಬೇಡ್ಕರ್ 135ನೇ ಜನ್ಮ‌ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ಅಂಬೇಡ್ಕರ್ ಅವರು ಬಡವರ ಹಾಗೂ ಹಿಂದುಳಿದ ವರ್ಗಗಳ ಉನ್ನತಿಗಾಗಿ ತಮ್ಮ ಸಂಪೂರ್ಣ ಜೀವನವನ್ನು ಅರ್ಪಿಸಿದ್ದು, ಸಮಾನತೆ ಆಧಾರಿತ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ಭಾರತೀಯ ಸಂವಿಧಾನವನ್ನು ರೂಪಿಸಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದ ಮಹತ್ವದ ವ್ಯಕ್ತಿತ್ವ ಅವರದು. ಜಾತಿ ಪದ್ಧತಿಯನ್ನು ನಿರ್ಮೂಲಗೊಳಿಸಿ ಸಮಾನತೆ ಸ್ಥಾಪನೆಗೆ ಅವರು ಕೈಗೊಂಡ ಪ್ರಯತ್ನಗಳು ಶ್ಲಾಘನೀಯ.ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಅಳವಡಿಸಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಿದ ಮಹಾನ್ ನಾಯಕ.ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಅವರ ಮೂರು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಬಲ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಉಪ ಮಹಾಪೌರರಾದ ಹನುಂತ ಕೊಂಗಾಲಿ ಕರೆ ನೀಡಿದರು.
ಪೋಲಿಸ್ ಆಯುಕ್ತ ಭೋರಸೆ ಭೂಷಣ ಗುಲಾಬರಾವ್ ಮಾತನಾಡಿ, ನಮ್ಮ‌ ದೇಶಕ್ಕೆ ಸಂವಿಧಾನ, ಸಾಮಾಜಿಕ ನ್ಯಾಯ ಒದಗಿಸುವುದು ಸೇರಿದಂತೆ‌ ಇನ್ನೂ ಅನೇಕ ಕಾರ್ಯಗಳನ್ನು ಮಾಡಿದಂತಹ ಮಹನ ಚೇತನ ಡಾ.ಬಿ.ಆರ್.ಅಂಬೇಡ್ಕರ ಅವರು. ಅವರು ತಮ್ಮ ಜೀವನದಲ್ಲಿ ಇಷ್ಟೆಲ್ಲ ಸಾಧನೆ ಮಾಡಿರುವುದು ಪ್ರತಿಯೊಬ್ಬರಿಗೂ ಆದರ್ಶವಾಗಿದ್ದಾರೆ.
ಅಂಬೇಡ್ಕರ ಅವರು ದೇಶದ ಉನ್ನತಿಗಾಗಿ ಕಷ್ಟ ಪಟ್ಟಂತೆ ಇಂದು ನಾವೆಲ್ಲರೂ ಒಂದು ಎಂಬ ಮನೋಭಾವನೆಯಿಂದ ದೇಶವನ್ನು ಕಟ್ಟುವ ಕಾರ್ಯವಾಗಬೇಕಾಗಿದೆ ಎಂದು ನುಡಿದರು.
ಪ್ರೊ.ಬಸವರಾಜ ಜಾಲವಾದಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ ಅವರು ಬಾಲ್ಯದಿಂದ ಹಿಡಿದು ತಮ್ಮ ಜೀವನದಲ್ಲಿ ಅನುಭವಿಸಿದಂತಹ ಕಷ್ಟ, ಅಸಮಾನತೆ ನಿವಾರಣೆಗೆ ತಮ್ಮ ಇಡೀ ಜೀವನ ಮುಡುಪಾಗಿಟ್ಟಿದ್ದು ಅವರ ಜೀವನವನ್ನು ಪ್ರತಿಯೊಬ್ಬರು ಆದರ್ಶವಾಗಿಟ್ಟುಕೊಳ್ಳಬೇಕು ಎಂದರು.