ಬೆಳಗಾವಿ: ಬೆಳಗಾವಿ ತಾಲೂಕಿನ ಕಲಕಾಂಬ ಗ್ರಾಮದ ರೈತನ ಪುತ್ರ ರಾಹುಲ ಪಾಟೀಲ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 224ನೇ ರ‌್ಯಾಂಕ್ ಪಡೆದು ಯಶಸ್ವಿಯಾಗಿದ್ದಾರೆ.
ಸದ್ಯ ಡೆಹ್ರಾಡೂನ್‌ನಲ್ಲಿರುವ ಇಂದಿರಾ ಗಾಂಧಿ ನ್ಯಾಷನಲ್ ಫಾರೆಸ್ಟ್ ಅಕಾಡೆಮಿಯಲ್ಲಿ 4 ತಿಂಗಳಿನಿಂದ ಭಾರತೀಯ ಅರಣ್ಯ ಸೇವೆ ತರಬೇತಿ ಪಡೆಯುತ್ತಿರುವ ರಾಹುಲ ಸತತ ನಾಲ್ಕು ಬಾರಿ ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನದಲ್ಲಿ ವಿಫಲರಾಗಿದ್ದರು. ಈ ಬಾರಿ 6ನೇ ಯತ್ನದಲ್ಲಿ ಉತ್ತೀರ್ಣರಾಗಿ ದೇಶಕ್ಕೆ 224ನೇ ರ‌್ಯಾಂಕ್ ಪಡೆದಿದ್ದಾರೆ.
ರಾಹುಲ ಪಾಟೀಲ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆಳಗಾವಿ ವನಿತಾ ವಿದ್ಯಾಲಯದಲ್ಲಿ, ಕೆಎಲ್‌ಇ ಆರ್‌ಎಲ್‌ಎಸ್ ಕಾಲೇಜಿನಲ್ಲಿ ಪಿಯು ಶಿಕ್ಷಣ, ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ತಂದೆ ಕೃಷಿಯಲ್ಲಿ ತೊಡಗಿದ್ದು, ಸಹೋದರ ವ್ಯಾಪಾರಿಯಾಗಿದ್ದಾರೆ. ಸಹೋದರಿ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಗಾಗಿ ನಿತ್ಯ 10ರಿಂದ 12 ಗಂಟೆ ಓದುತ್ತಿದ್ದೆ. ಐಎಫ್‌ಎಸ್ ತರಬೇತಿ ಆರಂಭವಾದ ಬಳಿಕ ಓದುವ ಅವಧಿ ಕಡಿಮೆಯಾಗಿತ್ತು. ಸತತ ಪರಿಶ್ರಮ ಮತ್ತು ದೃಢ ನಂಬಿಕೆ ಈ ಯಶಸ್ಸಿಗೆ ಕಾರಣ. ಹಲವು ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಈ ಬಾರಿ ಪರೀಕ್ಷೆಯಲ್ಲಿ ಯಶಸ್ಸು ಸಿಕ್ಕಿದ್ದು, ಕುಟುಂಬದ ಕನಸನ್ನು ನನಸು ಮಾಡಿದ ಸಂತೋಷವಿದೆ.