ರಾಮದುರ್ಗದ ವಿದ್ಯಾ ಪ್ರಸಾರಕ ಸಮಿತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಸ್.ಎ.ಯತ್ನಟ್ಟಿ, ಎಸ್.ಬಿ.ಆಲಗುಂಡಿ, ಎಸ್.ಲೇಪಾಕ್ಷಿ, ಡಾ.ಆರ್.ಎಲ್.ಕುಳ್ಳೂರ ಇತರರಿದ್ದರು.
- ಉಪನ್ಯಾಸಕಿ ಎಸ್.ಎ.ಯತ್ನಟ್ಟಿ ಅಭಿಮತ
- ಮಹಿಳಾ ದಿನ ಆಚರಣೆ
ರಾಮದುರ್ಗ: ಮಹಿಳೆ ಅಬಲೆಯಲ್ಲ ಸಬಲೆ ಎಂಬ ಮಾತಿನಂತೆ ಶಿಕ್ಷಣ, ಕಲೆ, ಸಾಹಿತ್ಯ ಸೇರಿದಂತೆ ಸರ್ವ ರಂಗದಲ್ಲೂ ಮಹಿಳೆ ತನ್ನದೇ ಛಾಪು ಮೂಡಿಸಿ, ಪುರುಷನಿಗೆ ಸಮನಾಗಿ ಬೆಳೆದಿದ್ದಾಳೆ ಎಂದು ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಎಸ್.ಎ.ಯತ್ನಟ್ಟಿ ಹೇಳಿದರು.
ನಗರದ ವಿದ್ಯಾ ಪ್ರಸಾರಕ ಸಮಿತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಮಹಿಳೆ ತನ್ನ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿತು ಎಲ್ಲ ಪರಿಸ್ಥಿತಿ ನಿಭಾಯಿಸುವುದನ್ನು ಅರಿತಿದ್ದಾಳೆ ಎಂದರು.
ಉಪನ್ಯಾಸಕಿ ಎಸ್.ಬಿ.ಆಲಗುಂಡಿ ಮಾತನಾಡಿ, ಮಹಿಳೆ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿ ಉಳಿದಿಲ್ಲ. ಆಕೆ ಮನಸ್ಸು ಮಾಡಿದರೆ ಆಕಾಶಕ್ಕಿಂತ ಎತ್ತರಕ್ಕೆ ಬೆಳೆಯಬಲ್ಲಳು ಎಂಬುದನ್ನು ತೋರಿಸಿದ್ದಾಳೆ ಎಂದು ಹೇಳಿದರು.
ಸಂಯೋಜಕ ಎಸ್.ಲೇಪಾಕ್ಷಿ, ಪ್ರಾಚಾರ್ಯ ಡಾ.ಆರ್.ಎಲ್.ಕುಳ್ಳೂರ, ಜಿಮಖಾನಾ ಉಪಾಧ್ಯಕ್ಷ ಪ್ರೊ.ಜಿ.ಬಿ.ಬಟಕುರ್ಕಿ, ಪ್ರೊ.ಜಿ.ಪಿ.ಗಡದೆ, ಪ್ರೊ.ಎಸ್.ಎಂ.ನಾಯ್ಕ, ಡಾ.ಎನ್.ಎನ್.ವಾಳ್ವೇಕರ, ಪ್ರೊ.ಎಂ.ಆರ್.ಕುಂಬಾರ, ಡಾ.ವಿ.ಬಿ.ವಗ್ಗರ, ಶಿವಲೀಲಾ ಗೋಲಣ್ಣವರ, ಭಾರತಿ ಪಮ್ಮಾರ, ಕಾರ್ಯದರ್ಶಿ ತಳವಾರ, ಯಶಸ್ವಿನಿ ಹಕಾಟಿ ಇತರರಿದ್ದರು.