ಬೆಳಗಾವಿಯಲ್ಲಿ ಜರುಗಿದ ಲಿಂಗಾಯತ ಬಿಸಿನೆಸ್ ಫೋರಂ ಮಹಿಳಾ ಘಟಕ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರು.
ಪ್ರತಿ ಭಾರತೀಯ ಮಹಿಳೆ ಬೆಳೆಯುತ್ತಲೇ ಮನೆಯಲ್ಲಿ ಸ್ವಾಭಾವಿಕವಾಗಿ ದೈನಂದಿನ ಕೆಲಸ ಕಲಿಯುತ್ತ ಉದ್ಯಮಶೀಲತೆ ಮೈಗೂಡಿಸಿಕೊಂಡಿರುತ್ತಾಳೆ. ಆದರೆ, ಬಹಳಷ್ಟು ಜನ ಆ ಪ್ರತಿಭೆ ಮತ್ತು ಕೌಶಲವನ್ನು ಅಧಿಕೃತವಾಗಿ ಬಳಸುತ್ತಿಲ್ಲ. ಉದ್ಯಮಿಯಾಗುವುದರಲ್ಲಿ ಹಾಗೂ ಸಾಧನೆ ಮಾಡುವುದರಿಂದ ಹಿಂಜರಿಯುತ್ತಿದ್ದಾರೆ. ಇದು ನಮ್ಮ ಸಮುದಾಯದ ದೌರ್ಭಾಗ್ಯ ಎಂದು ಉದ್ಯಮಿ ಅಜಿತ ಪಾಟೀಲ ಹೇಳಿದರು.
ಕಾಕತಿಯ ವುಡ್ರೋಸ್ ಹೋಟೆಲ್ ಸಭಾಭವನದಲ್ಲಿ ಈಚೆಗೆ ಜರುಗಿದ ಸಮಾರಂಭದಲ್ಲಿ ಬೆಳಗಾವಿ ಲಿಂಗಾಯತ ಬಿಸಿನೆಸ್ ಫೋರಂ ಮಹಿಳಾ ಘಟಕ ಹಾಗೂ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿಯ ಪ್ರತಿಭೆಗಳು ಮರಳಿ ಇಲ್ಲಿಯೇ ಬಂದು ಮಹಾ ಸಾಧನೆ ಮಾಡಲು ಪೂರಕವಾದ ವಾತಾವರಣ ನಿರ್ಮಾಣ ಮಾಡುವುದು ಅತ್ಯವಶ್ಯ. ಈ ನಿಟ್ಟಿನಲ್ಲಿ ಲಿಂಗಾಯತ ಬಿಸಿನೆಸ್ ಫೋರಂ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಸಮುದಾಯ ಸೇವಾ ನಿರ್ದೇಶಕಿ ಶಿವಲೀಲಾ ಕಂಪ್ಲಿ ಮಾತನಾಡಿ, ಘಟಕವು ಮಾರ್ಗದರ್ಶನ, ಆರ್ಥಿಕತೆ, ಸಾಕ್ಷರತೆ, ಮಾರುಕಟ್ಟೆ, ಸಂಪರ್ಕ, ಅವಕಾಶ ಮತ್ತು ವೈವಿಧ್ಯಮಯ ಕೈಗಾರಿಕಾ ವಲಯಗಳಲ್ಲಿ ಹೊಸ ಎತ್ತರಕ್ಕೆ ಏರಲು ವೇದಿಕೆ ಒದಗಿಸುವ ಗುರಿ ಹೊಂದಿದೆ ಎಂದು ವಿವರಿಸಿದರು.
ಕಾರ್ಯಕಾರಿ ಸಮಿತಿ ಅಧ್ಯಕ್ಷ ಲಿಂಗರಾಜ ಜಗಜಂಪಿ ಮಾತನಾಡಿ, ಸಮಾನತೆ ತತ್ತ್ವ ಸಾರುವುದೇ ಲಿಂಗಾಯತ ಧರ್ಮದ ತಳಹದಿಯಾಗಿದೆ. ಈ ನಿಟ್ಟಿನಲ್ಲಿ ಸಮುದಾಯದಲ್ಲಿ ಮಹಿಳಾ ಉದ್ಯಮಿಗಳನ್ನು ಬೆಳೆಸುವಲ್ಲಿ ಘಟಕ ತೊಡಗಿಕೊಳ್ಳಲಿದೆ ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ಶೀತಲ ಚಿಲಮಿ ಮಾತನಾಡಿ, ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಈ ವೇದಿಕೆ ಮೂಲಕ ಸಮಾಜಕ್ಕೆ ತೋರಿಸಬೇಕು. ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡುವಲ್ಲಿ ಸ್ವಾವಲಂಬಿ ಮತ್ತು ಯಶಸ್ವಿ ಮಹಿಳಾ ಉದ್ಯಮಿಗಳ ಪರಂಪರೆಯನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಫೋರಂ ಸಂಸ್ಥಾಪಕ ಸದಸ್ಯ ಮಲ್ಲಿಕಾರ್ಜುನ ಮೂದನೂರ, ಫೋರಂನ ಪ್ರಮುಖ ಮಜಲುಗಳನ್ನು ವಿವರಿಸಿದರು.
ಶೀತಲ ಚಿಲಮಿ ಅಧ್ಯಕ್ಷೆ, ಶಿವಲೀಲಾ ಕಂಪ್ಲಿ, ಜ್ಯೋತಿ ನಿಂಬಾಳ ಖಜಾಂಚಿ, ಡಾ.ಜ್ಯೋತಿ ಮಾಸ್ತಿಹೊಳಿ ಉಪಾಧ್ಯಕ್ಷೆ ಆಶಾ ಪಾಟೀಲ ನಿರ್ದೇಶಕಿ, ಅಶ್ವಿನಿ ಪಾಟೀಲ, ರೇಖಾ ಕಳ್ಳಿಮನಿ ಸಾರ್ವಜನಿಕ ಸ್ವರೂಪದ ನಿರ್ದೇಶಕಿಯರಾಗಿ ಪದಗ್ರಹಣ ಮಾಡಿದರು.
ಆಡಳಿತ ಮಂಡಳಿ ಟ್ರಸ್ಟಿಗಳಾದ ಈರಣ್ಣ ದೇಯನ್ನವರ, ರಾಜೀವ ಶೀಗಿಹಳ್ಳಿ, ಲಕ್ಷ್ಮಿಕಾಂತ ಗುರವ, ವಿಜಯ ಪಾಟೀಲ, ಮಹಾಂತೇಶ ಪುರಾಣಿಕ ಇತರರಿದ್ದರು.
ಈರಾ ತಿಗಡಿ ಮತ್ತು ಆರೋಹಿ ಶೀಲವಂತ ಪ್ರಾರ್ಥಿಸಿದರು. ಲಿಂಗರಾಜ ಜಗಜಂಪಿ ಸ್ವಾಗತಿಸಿದರು. ಮಡಿವಾಳಪ್ಪ ತಿಗಡಿ ನಿರೂಪಿಸಿದರು. ಶಿವಲೀಲಾ ಪ್ರಣಾಳಿಕೆ ಮಂಡಿಸಿದರು. ಸಂತೋಷ ಪಾವಟೆ ಮತ್ತು ಜ್ಯೋತಿ ನಿಂಬಾಳ ಪರಿಚಯಿಸಿದರು. ಕಾರ್ಯದರ್ಶಿ ಸಚಿನ ಬೈಲವಾಡ ವಂದಿಸಿದರು.