ಬೆಳಗಾವಿಯ ಜಿ.ಎ.ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಸ್ನೇಹಸಮ್ಮೇಳನದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಿರಣ ಗಣಾಚಾರಿ, ಸಿ.ಪಿ.ದೇವಋಷಿ, ಡಿ.ಎಸ್.ಪವಾರ, ಶ್ರೇಯಾ ಕುಂದರನಾಡ, ಹುಸೇನ್ ಪಠಾಣ ಇತರರಿದ್ದರು.  
ಬೆಳಗಾವಿ

ಶ್ರದ್ಧೆಯ ಓದಿನಿಂದ ವಿದ್ಯಾರ್ಥಿ ಭವಿಷ್ಯ ಸುಭದ್ರ

ಬೆಳಗಾವಿ: ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ಜೀವನದ ಅತ್ಯಂತ ಮಹತ್ವದ ಘಟ್ಟ. ಹಾಗಾಗಿ, ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿನಲ್ಲಿ ತೊಡಗಿ, ಭವಿಷ್ಯಕ್ಕೆ ಭದ್ರ ಬುನಾದಿ ರೂಪಿಸಿಕೊಳ್ಳಬೇಕು ಎಂದು ರಾಜ್ಯ ಲೆಕ್ಕಪತ್ರ ಹಾಗೂ ಲೆಕ್ಕ ಪರಿಶೋಧನಾ ಇಲಾಖೆ ಲೆಕ್ಕಪರಿಶೋಧನಾಧಿಕಾರಿ ಕಿರಣ ಗಣಾಚಾರಿ ಸಲಹೆ ನೀಡಿದರು.
ಕೆಎಲ್ಇ ಸಂಸ್ಥೆಯ ಗಿಲಗಿಂಚಿ ಅರಟಾಳ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮತ್ತು ಸ್ನೇಹಸಮ್ಮೇಳನದಲ್ಲಿ ಮಾತನಾಡಿ, ಜಿಎ ಪ್ರೌಢಶಾಲೆ ಬಹಳ ದೊಡ್ಡ ಇತಿಹಾಸ ಹೊಂದಿದೆ.
ಇಂತಹ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿ ಜತೆಗೆ ಶಾಲೆಯ ಗೌರವಎತ್ತಿ ಹಿಡಿಯುವ ರೀತಿಯಲ್ಲಿ ಫಲಿತಾಂಶ ಪಡೆಯಬೇಕು ಎಂದು ಹುರಿದುಂಬಿಸಿದರು. ಉಪ ಪ್ರಾಚಾರ್ಯ ಸಿ.ಪಿ.ದೇವಋಷಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಿ.ಎಸ್.ಪವಾರ, ಶಾಲಾ ಪ್ರಧಾನಿ ಶ್ರೇಯಾ ಕುಂದರನಾಡ, ಹುಸೇನ್ ಪಠಾಣ ವೇದಿಕೆಯಲ್ಲಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಸತ್ಕರಿಸಲಾಯಿತು.
ಶ್ರೀನಿಧಿ ಬೊಮ್ಮನ್ನವರ ಪ್ರಾರ್ಥಿಸಿದರು. ಎ.ಆರ್.ಪಾಟೀಲ ಸ್ವಾಗತಿಸಿದರು. ಎಸ್.ಜೆ.ಏಳುಕೋಟಿ ಪರಿಚಯಿಸಿದರು. ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಎಸ್.ಬಿ.ಕೋರೆ ವರದಿ ವಾಚಿಸಿದರು. ಶಿಕ್ಷಕ ಸಿ.ಎಂ.ಪಾಗಾದ, ವಿದ್ಯಾರ್ಥಿಗಳಾದ ಕ್ರಿಶಾ ಬಾಂಡಗಿ, ಚಂದ್ರಿಕಾ ಹುಕ್ಕೇರಿ, ಸ್ಮಿತಾ ಅಗಸಗಿ, ಅಭಿಷೇಕ ಮಾಲಗಿತ್ತಿ ಅನಿಸಿಕೆ ವ್ಯಕ್ತಪಡಿಸಿದರು.
ಎಚ್.ಜಿ.ವೀರಗಂಟಿ, ಎ.ಜಿ.ಬಾಯನ್ನವರ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ವಿ.ಐ.ಅಂಗಡಿ ಮತ್ತು ಎಸ್.ಎಸ್.ಹಲವಾಯಿ ನಿರೂಪಿಸಿದರು. ಎಂ.ಎಸ್.ಮಗದುಮ್ಮ ವಂದಿಸಿದರು.