ಯರಗಟ್ಟಿ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸತೀಶ ಜಾರಕಿಹೊಳಿ ಚಾಲನೆ ನೀಡಿದರು. ವಿಶ್ವಾಸ ವೈದ್ಯ, ಚನ್ನರಾಜ ಹಟ್ಟಿಹೊಳಿ ಇತರರಿದ್ದರು.
ಬೆಳಗಾವಿ:ಯರಗಟ್ಟಿ ತಾಲೂಕು ಘೋಷಣೆಯಾಗಿ ಹಲವು ವರ್ಷಗಳ ಬಳಿಕ ಜನರ ಬಹುದಿನಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ತಾಲೂಕು ಆಡಳಿತ ಕೇಂದ್ರ ಕಟ್ಟಡ (ಪ್ರಜಾಸೌಧ) ನಿರ್ಮಾಣಕ್ಕೆ ಭೂಮಿಪೂಜೆ, ತಾಲೂಕು ಪಂಚಾಯತಿ ಕಚೇರಿ ಉದ್ಘಾಟಿಸುವ ಮೂಲಕ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ವಿಶ್ವಾಸ ವೈದ್ಯ ಯರಗಟ್ಟಿಯ ಆಡಳಿತಾತ್ಮಕ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಯರಗಟ್ಟಿ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಈ ಯೋಜನೆಯಿಂದ ಯರಗಟ್ಟಿ ಭಾಗದ ಆಡಳಿತ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದ್ದು, ಸಾರ್ವಜನಿಕರಿಗೆ ವಿವಿಧ ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ಸುಲಭವಾಗಿ ಲಭ್ಯವಾಗಲಿವೆ. ವೇಗ, ಪಾರದರ್ಶಕತೆ ಹಾಗೂ ಜನಸ್ನೇಹಿ ಆಡಳಿತಕ್ಕೆ ಇದು ಸಹಕಾರಿಯಾಗಲಿದೆ. ನೂತನ ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿ ನಿಗದಿತ ಸಮಯದಲ್ಲಿಯೇ ಪೂರ್ಣಗೊಳ್ಳಲಿದೆ ಎಂದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಯರಗಟ್ಟ ತಾಲೂಕಿನ ಪ್ರಜಾಸೌಧ ನಿರ್ಮಾಣ ಹಾಗೂ ನೂತನ ತಾಲೂಕು ಪಂಚಾಯಿತಿ ಕಚೇರಿ ನಿರ್ಮಾಣವು ಯರಗಟ್ಟಿ ಸಮಗ್ರ ಅಭಿವೃದ್ಧಿಯ ದಿಕ್ಕಿನಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಮುಂದಿನ ದಿನಗಳಲ್ಲಿ ಈ ಭಾಗದ ಆಡಳಿತ ವ್ಯವಸ್ಥೆಗೆ ಹೊಸ ರೂಪ ನೀಡಲಿದೆ. ಜನರ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.
ಈಗಾಗಲೇ ಪೂರ್ಣ ಪ್ರಮಾಣದಲ್ಲಿ ತಾಲೂಕು ತಹಸೀಲ್ದಾರ ಕಚೇರಿ, ಪೊಲೀಸ್ ಠಾಣೆ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿವೆ. ತಾಲೂಕು ಕೋರ್ಟ್‌ಗೆ, ಪಟ್ಟಣ ಪಂಚಾಯತಿ ನೂತನ ಕಟ್ಟಡಕ್ಕೆ ಜಾಗ ಮಂಜೂರಾಗಿದ್ದು,ಶೀಘ್ರದಲ್ಲಿ ಕಟ್ಟಡ ನಿರ್ಮಾಣಕ್ಕೆ ಪೂಜೆ ನೆರವೇರಿಸಲಾಗುತ್ತಿದೆ. ಈ ಭಾಗದ ಸಮಗ್ರ ಅಭಿವೃದ್ಧಿ ಬದ್ಧರಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ವಿಧಾನಪರಿಷತ ಸದಸ್ಯ ಚನ್ನರಾಜ ಹಟ್ಟಿಹೊಳಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಬಡಕುಂದ್ರಿ, ಸವದತ್ತಿ ತಾಲೂಕು ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ, ಯರಗಟ್ಟಿ ತಾಲೂಕು ತಹಸೀಲ್ದಾರ ಮಾದವಾನಂದ ಗುಂಡಪ್ಪಗೋಳಿ, ಜಿಪಂ ಮಾಜಿ ಸದಸ್ಯ ಫಕರೀಪ್ಪ ಹದ್ದನ್ನವರ, ಟಿಎಪಿಎಂಸಿ ಅಧ್ಯಕ್ಷ ರವೀಂದ್ರ ಯಲಿಗಾರ, ಮಂಜುನಾಥ ತಡಸಲೂರ ಇತರರಿದ್ದರು.
ಯರಗಟ್ಟಿ ತಾಲೂಕು ಮಟ್ಟದ ಕಚೇರಿಗಳ ಆರಂಭ ಕುರಿತು ವಿಜಯವಾಣಿ ದಿನ ಪತ್ರಿಕೆಯಲ್ಲಿ ನಿರಂತರ ಪ್ರಕಟವಾದ ಸುದ್ದಿಗೆ ಸ್ಪಂದಿಸಿರುವ ಸರ್ಕಾರ ತಾಲೂಕು ಮಟ್ಟದ ಪ್ರಜಾಸೌಧ ಕಟ್ಟಡ ನಿರ್ಮಾಣ, ತಾಪಂ ಆರಂಭಕ್ಕೆ ಅಧಿಕೃತವಾಗಿ ಚಾಲನೆ ನೀಡಿದೆ.