ಬೆಳಗಾವಿ ಜಿಲ್ಲಾ ಕ್ರೀಡಾಂಗಣ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. ಮೊಹಮ್ಮದ್ ರೋಷನ್, ರಾಹುಲ ಶಿಂಧೆ, ಭೂಷಣ ಬೋರಸೆ ಇತರರಿದ್ದರು.
ಬೆಳಗಾವಿ: ಜಿಲ್ಲಾದ್ಯಂತ ನಕಲಿ ಆಧಾರ್ ಗುರುತಿನ ಚೀಟಿ ಸೇರಿ ವಿವಿಧ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಆಸ್ತಿ ಮಾರಾಟ ಮಾಡುವ ಪ್ರಕರಣಗಳು ಗಮನಕ್ಕೆ ಬಂದಿದ್ದು, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನ ನಂತರ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ನಕಲಿ ಆಧಾರ್ ಚೀಟಿ ಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಈ ಸಮಸ್ಯೆ ನಿವಾರಿಸಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಪಡೆ ರಚಿಸಲಾಗುವುದು. ಆಧಾರ್ ನವೀಕರಣ ಸೇವೆ ಒದಗಿಸುವ ಖಾಸಗಿ ಕೇಂದ್ರ ಮೇಲೆ ನಿಗಾ ವಹಿಸಲಾಗುವುದು ಎಂದರು.
ಆಸ್ತಿಗಳ ನೋಂದಣಿ ಯಾವುದೇ ಸ್ಥಳದಲ್ಲಿ ಮಾಡಲು ಅವಕಾಶ ಕಲ್ಪಿಸಿದ್ದರಿಂದ ದುರುಪಯೋಗ ಹೆಚ್ಚಾಗುತ್ತಿದ್ದು, ವಂಚನೆಗೆ ಒಳಗಾದವರು ಸಹ ದೂರುಗಳನ್ನು ಸಲ್ಲಿಸಬೇಕು. ಆಗ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.
ರಾಜ್ಯದಲ್ಲಿ ಒಟ್ಟು 48 ರಾಷ್ಟ್ರೀಯ ಹೆದ್ದಾರಿ ಯೋಜನೆ ಒಂದು ದಶಕಕ್ಕೂ ಹೆಚ್ಚು ಕಾಲ ಬಾಕಿ ಉಳಿದಿದ್ದವು. 32 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವವನ್ನು 2017ರಲ್ಲಿ
ಎನ್‌ಎಚ್‌ಎಐಗೆ ಕಳುಹಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ಬಳಿಕ 41 ಯೋಜನೆ ತೆರವುಗೊಳಿಸಿದ್ದು, ಕೆಲಸಗಳು ಪ್ರಗತಿಯಲ್ಲಿವೆ. ಕೆಲವು ಅಡೆತಡೆಗಳಿಂದಾಗಿ ಏಳು ಕಾಮಗಾರಿ ಬಾಕಿ ಉಳಿದಿದ್ದು, ಶೀಘ್ರ ಪರಿಹರಿಸಲಾಗುವುದು. 30 ಹೊಸ ಯೋಜನೆಗಳಿಗೆ ಅನುದಾನ ಬಿಡುಗಡೆ ಕೇಂದ್ರ ಸಾರಿಗೆ ಸಚಿವ ನಿತಿನ ಗಡ್ಕರಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
500 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಿಎಂ ಚಾಲನೆ
ಬೆಳಗಾವಿ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ಜಿಲ್ಲಾ ಕ್ರೀಡಾಂಗಣ, ಮೇಲ್ಸೇತುವೆ ನಿರ್ಮಾಣ, ಪತ್ರಿಕಾ ಭವನ, ಸವದತ್ತಿ ಯಲ್ಲಮ್ಮ ಅಭಿವೃದ್ಧಿ, ಬಿಮ್ಸ್ ಆವರಣದಲ್ಲಿ ಕಿದ್ವಾಯಿ ಆಸ್ಪತ್ರೆ ನಿರ್ಮಾಣ ಸೇರಿ ಜಿಲ್ಲೆಯ ವಿವಿಧ ಭಾಗದಲ್ಲಿ ರಸ್ತೆ ಸೇತುವೆ ನಿರ್ಮಾಣ ಸೇರಿ 500 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಬೆಳಗಾವಿ ಕೋಟೆ ಕೆರೆ ಬದಲಾಗಿ ಸುವರ್ಣ ವಿಧಾನಸೌಧದ ಆವರಣದಲ್ಲೇ ಬುದ್ಧನ ಪ್ರತಿಮೆ ಸ್ಥಾಪನೆಗೆ ನಿರ್ಧರಿಸಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು.