ಸರ್ಕಾರಿ ಮಹಿಳಾ ನೌಕರರ ಸಂಘಕ್ಕೆ ಬೆಳಗಾವಿಯಲ್ಲಿ ಹೊಸ ಅಧ್ಯಾಯ 
ಬೆಳಗಾವಿ

ಸರ್ಕಾರಿ ಮಹಿಳಾ ನೌಕರರ ಸಂಘಕ್ಕೆ ಬೆಳಗಾವಿಯಲ್ಲಿ ಹೊಸ ಅಧ್ಯಾಯ

ಬೆಳಗಾವಿ: ಮಹಿಳಾ ಸರ್ಕಾರಿ ನೌಕರರ ಸಾಧನೆಗೆ ಸನ್ಮಾನ, ಸಂಘಟಿತ ಶಕ್ತಿಗೆ ಹೊಸ ದಿಕ್ಕು ನೀಡುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಬೆಳಗಾವಿ ಜಿಲ್ಲಾ ಶಾಖೆಯ ಉದ್ಘಾಟನಾ ಸಮಾರಂಭ ಮೇ 3ರಂದು ಬೆಳಗ್ಗೆ 11 ಗಂಟೆಗೆ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜರುಗಲಿದೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಜಿಲ್ಲಾ, ತಾಲೂಕು, ಹೋಬಳಿ, ಗ್ರಾಪಂ ಮಟ್ಟದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಮಹಿಳಾ ನೌಕರರನ್ನು ಗುರುತಿಸಿ, ಪ್ರತಿ ತಾಲೂಕಿನಿಂದ ಐದು ಜನರಂತೆ ಆಯ್ಕೆಯಾದ ಒಟ್ಟು 75 ಮಹಿಳೆಯರನ್ನು ವೇದಿಕೆಯ ಮೇಲೆ ಸನ್ಮಾನಿಸುವುದು ಕಾರ್ಯಕ್ರಮದ ವಿಶೇಷತೆ.
ಇದೇ ವೇಳೆ ಸಂಘದ ಜಿಲ್ಲಾ ಮಟ್ಟದ 25 ಪದಾಧಿಕಾರಿಗಳು ಹಾಗೂ ತಾಲೂಕು ಮಟ್ಟದ 30 ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವೂ ನಡೆಯಲಿದ್ದು, ಸಂಘಟನೆಯ ಬಲವರ್ಧನೆಗೆ ಇದು ಮಹತ್ವದ ಹೆಜ್ಜೆಯಾಗಿ ಕಾಣಲಾಗಿದೆ.
ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದರಾದ ಜಗದೀಶ ಶೆಟ್ಟರ್ ಹಾಗೂ ಪ್ರಿಯಾಂಕಾ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.ಈ ಕುರಿತು ಸಂಘದ ಜಿಲ್ಲಾಧ್ಯಕ್ಷೆ ಗೀತಾ ದಳವಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.