- ಉತ್ತರ, ದಕ್ಷಿಣ, ಕರಾವಳಿ ಶೈಲಿ ಊಟ
- ಸಚಿವರು, ಶಾಸಕರಿಗೆ ಭರ್ಜರಿ ಆತಿಥ್ಯ
ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 8ರಿಂದ ಆರಂಭವಾಗಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುವವರಿಗಾಗಿ ಉತ್ತರ, ದಕ್ಷಿಣ, ಕರವಾಳಿ ಭಾಗದ ಶೈಲಿಯ ಊಟದ ಮೆನು ಸಿದ್ಧಗೊಂಡಿದ್ದು, ಗಮನ ಸೆಳೆಯಲಿದೆ!
ಈ ಬಾರಿ ಚಳಿಗಾಲ ಅಧಿವೇಶನದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುವೆಯೇ ಸಚಿವರು, ಶಾಸಕರು, ವಿಧಾನಸಭೆ, ವಿಧಾನ ಪರಿಷತ್ ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಮಧ್ಯಾಹ್ನ ಸುವರ್ಣ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯಾ ಪ್ರದೇಶದ ಶೈಲಿಯ ಖಾದ್ಯಗಳನ್ನು ಉಣಬಡಿಸಲು ಹಾಗೂ ಬೆಳಗಾವಿ, ಮೈಸೂರು, ಕರಾವಳಿ, ಕಲಬುರಗಿ ಭಾಗದ ಪ್ರಸಿದ್ಧ ಸಿಹಿ ಪದಾರ್ಥ ನೀಡಲು ಜಿಲ್ಲಾಡಳಿತ ವಿಶೇಷ ಮೆನು ಸಿದ್ಧಪಡಿಸಿಕೊಂಡಿದೆ.
ಆಯಾ ಭಾಗದ ಊಟದ ಕೌಂಟರ್‌ಗಳನ್ನು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗುತ್ತಿದೆ. ಅಧಿವೇಶನಕ್ಕೆ ಬರುವವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಸರ್ಕಾರದ ವಿವಿಧ ಇಲಾಖೆಯ ಅತಿಥಿಗೃಹಗಳು, ಸರ್ಕಾರಿ ಪ್ರವಾಸಿ ಮಂದಿರ, ಖಾಸಗಿ ರೆಸ್ಟೋರೆಂಟ್, ಲಾಡ್ಜ್‌ಗಳು ಸೇರಿ 60 ಕಡೆ 4ರಿಂದ 5 ಸಾವಿರ ಜನರು ವಾಸ್ತವ್ಯ ಹೂಡಲಿದ್ದಾರೆ. ಇವರಿಗೆ ಬೆಳಗ್ಗೆ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ, ಮೂರು ಹೊತ್ತು ಉತ್ತರ, ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗದ ಸಿಹಿ ಪದಾರ್ಥ ನೀಡುವ ಕುರಿತು ಚರ್ಚಿಸಲಾಗುತ್ತಿದೆ. ಸಭಾಧ್ಯಕ್ಷರು, ಸಭಾಪತಿ ಅನುಮತಿ ನೀಡಿದರೆ ಅಂತಿಮಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
8,800 ಪೊಲೀಸರ ನಿಯೋಜನೆ
ವಿವಿಧ ಸಂಘಟನೆಗಳು ಪ್ರತಿಭಟನೆಗೆ ನಡೆಸುತ್ತಿರುವ ಹಿನ್ನೆಲೆ ಅಧಿವೇಶನಕ್ಕೆ ಭದ್ರತೆ ಹೆಚ್ಚಿಸಲಾಗಿದೆ. ಪ್ರತಿ ವರ್ಷ 6 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತಿತ್ತು. ಈ ಬಾರಿ 8,800ಕ್ಕೆ ಹೆಚ್ಚಿಸಲಾಗಿದೆ. ಈ ಎಲ್ಲ ಸಿಬ್ಬಂದಿ ವಸತಿಗೆ ಟೆಂಟ್ ಸ್ಥಾಪನೆ ಮಾಡಲಾಗುತ್ತಿದೆ. ಅಲ್ಲದೆ, ಭದ್ರತಾ ಸಿಬ್ಬಂದಿಗೂ ಉತ್ತರ, ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಶೈಲಿಯ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿಯೊಬ್ಬರ ಆರೋಗ್ಯ ದೃಷ್ಟಿಯಿಂದ ಬೆಳಗ್ಗೆ, ರಾತ್ರಿ ಬಿಸಿಬಿಸಿ ಟೀ, ಕಾಫಿ, ನಂದಿನಿ ಹಾಲು ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತರಹೇವಾರಿ ತಿಂಡಿಗಳು
ಹತ್ತು ದಿನ ನಡೆಯುವ ಅಧಿವೇಶನದಲ್ಲಿ ಭಾಗವಹಿಸುವವರಿಗೆ ಸೌಧದಲ್ಲಿ ಮಧ್ಯಾಹ್ನ ವಿಶೇಷ ಶೈಲಿಯ ಊಟದ ವ್ಯವಸ್ಥೆ ಮಾಡುವ ಕುರಿತು ನಿರ್ಧರಿಸಲಾಗಿದೆ. ಅಧಿವೇಶನ ವೇಳೆ ಪ್ರತಿ ದಿನ ರಾಜ್ಯದ ಒಂದೊಂದು ಭಾಗದ ಊಟದ ವಿಶೇಷತೆ ಒಳಗೊಂಡಿರಲಿದೆ. ಪ್ರತಿಯೊಬ್ಬರ ಆರೋಗ್ಯ ದೃಷ್ಟಿಯಿಂದ ಮೆನು ಸಿದ್ಧಪಡಿಸಲಾಗಿದೆ.