, ಬೆಳಗಾವಿ:ತಾಪಮಾನ ನಿಯಂತ್ರಣ, ಆಕ್ಸಿಜನ್ ಗುಣಮಟ್ಟ ಹೆಚ್ಚಿಸುವ, ಅರಣ್ಯ ಸಂಪತ್ತು ಹೆಚ್ಚಿಸುವ ನಿಟ್ಟಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಿಯಾವಾಕಿ ಕಿರು ಅರಣ್ಯ ಅಭಿವೃದ್ಧಿ ಪಡಿಸುವ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದೆ!
ಹೌದು. ಬೆಳಗಾವಿ ಮಹಾನಗರ ಪಾಲಿಕೆ, ಗೋಕಾಕ, ನಿಪ್ಪಾಣಿ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಅಥಣಿ ನಗರಸಭೆ ಸೇರಿ ಪುರಸಭೆ, ಪಟ್ಟಣ ಪಂಚಾಯತಿ ವ್ಯಾಪ್ತಿಯ ಪ್ರದೇಶದಲ್ಲಿ ಪರಿಸರ ದಿನ ಅಂಗವಾಗಿ 2ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಡುವ ಮೂಲಕ ‘ಮಿಯಾವಾಕಿ ಕಿರು ಅರಣ್ಯ ಅಭಿವೃದ್ಧಿ ಪಡಿಸುವ ಯೋಜನ’ ಅನುಷ್ಠಾನಗೊಳಿಸುತ್ತಿದೆ. ಇದಕ್ಕಾಗಿ ಪ್ರತಿ ಎಕರೆಗೆ 14 ಲಕ್ಷ ರೂ.ರಂತೆ ಅನುದಾನ ಬಿಡುಗಡೆ ಮಾಡುತ್ತಿದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಉದ್ಯಾನವನ, ಸರ್ಕಾರಿ ಸಾರ್ವಜನಿಕ ಸ್ಥಳಗಳಲ್ಲಿ ಅರಣ್ಯ ಪ್ರದೇಶ ಬೆಳೆಸಲು ಉದ್ದೇಶಿಸಿದ್ದು, ಮೊದಲ ಹಂತದಲ್ಲಿಯೇ ಬೇವು, ಹುಣಸೆ, ಮಾವು, ಪೇರು, ದಾಳಿಂಬೆ ಹೀಗೆ ಆಕ್ಸಿಜನ್ ಹೆಚ್ಚಿಸುವ ಮರಗಳನ್ನು ನೆಡಲಾಗುತ್ತಿದೆ.ಬೆಳಗಾವಿ ಮಹಾನಗರದಲ್ಲಿ 20 ಸಾವಿರ, ವಿವಿಧ ನಗರಸಭೆಗಳಲ್ಲಿ 40 ಸಾವಿರ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ 30ಸಾವಿರ ಗಿಡಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ.
ಏನಿದು ಮಿಯಾವಾಕಿ ಮಾದರಿ? ಜಪಾನ್ ದೇಶದ ಡಾ.ಮಿಯಾವಾಕಿ ಎಂಬುವವರು ಉದ್ಯಾನವನಗಳಲ್ಲಿ ಗಿಡಗನ್ನು ನೆಟ್ಟುದಟ್ಟ ಕಾಡುಗಳನ್ನು ಬೆಳಸಿ ಪ್ರಸಿದ್ದರಾಗಿದ್ದಾರೆ. ಸಾಮಾನ್ಯವಾಗಿ 10 ರಿಂದ 20 ಅಡಿ ಅಂತರದಲ್ಲಿ ಸಸಿಗಳನ್ನು ನೆಡಲಾಗುತ್ತಿದೆ. ಅದರ ಬದಲು 4ರಿಂದ 5 ಅಡಿಗೆ ದಟ್ಟವಾಗಿ ಗಿಡಗಳನ್ನು ನೆಡುಉದು ಮಿಯಾವಾಕಿ ಮಾದರಿ ಎನ್ನಲಾಗುತ್ತಿದೆ. ಒಂದು ಎಕರೆಗೆ 18 ರಿಂದ 20 ಸಾವಿರ ಗಿಡಗಳನ್ನು ನೆಡಬಹುದು. ಚಿಕ್ಕ ಚಿಕ್ಕ ಉದ್ಯಾನವನಗಳಲ್ಲಿ ವಾಕಿಂಗ್ ಪಾಥ್ ಬಿಟ್ಟು ಉಳಿದ ಹಣ್ಣು ಹಂಪಲ ಗಿಡಗಳನ್ನು ನೆಡುವುದರಿಂದ ವಾತಾವರಣ ತಂಪಾಗಿಡಬಹುದು.ಜತೆಗೆ ಅರಣ್ಯ ಸಂಪತ್ತು ಹೆಚ್ಚಿಸುವುದು ಯೋಜನೆ ಮುಖ್ಯ ಉದ್ದೇಶವಾಗಿದೆ ಎಂದು ಪರಿಸರ ವಿಭಾಗ ಅಧಿಕಾರಿಗಳು ತಿಳಿಸಿದ್ದಾರೆ.
.........................
ನಿರ್ವಹಣೆ ಖಾಸಗಿ ಸಂಸ್ಥೆ ಹೆಗಲಿಗೆ!
ನಗರದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಿಯಾವಾಕಿ ಕಿರು ಅರಣ್ಯ ಅಭಿವೃದ್ಧಿ ಪಡಿಸುವ ಯೋಜನೆ ಅಡಿಯಲ್ಲಿ ಸಸಿ ನೆಟ್ಟು ಪೋಷಣೆ ಮಾಡುವವರೆಗೆ ಖಾಸಗಿ ಸಂಸ್ಥೆ, ಸಂಘ ಸಂಸ್ಥೆಗಳು ನೋಡಿಕೊಳ್ಳಲಿವೆ. ಕೆಲ ಭಾಗದಲ್ಲಿ ನಿರ್ವಹಣೆಗೆ ನಗರ ಸ್ಥಳೀಯ ಸಂಸ್ಥೆಗಳು ಅನುದಾನ ಮೀಸಲಿಡಲಿವೆ. ಒಮ್ಮೆ ನೆಟ್ಟಿರುವ ಸಸಿಗಳನ್ನು ಹಾಳಾಗದಂತೆ ಉಸ್ತುವಾರಿಯನ್ನು ಸ್ಥಳೀಯ ಸಂಸ್ಥೆಯ ಪರಿಸರ ವಿಭಾಗದ ಅಧಿಕಾರಿಗಳು ವಹಿಸಿಕೊಳ್ಳಲಿದ್ದಾರೆ.
.........................
ಶ್ರೀನಗರದಲ್ಲಿ 1ಎಕರೆ ಪ್ರದೇಶ ಆಯ್ಕೆ
ಬೆಳಗಾವಿ ಮಹಾನಗರ ಪಾಲಿಕೆಯು ಶ್ರೀನಗರದಲ್ಲಿರುವ 1 ಎಕರೆ ಪ್ರದೇಶದಲ್ಲಿ ಮಿಯಾವಾಕಿ ಕಿರು ಅರಣ್ಯ ಅಭಿವೃದ್ಧಿ ಪಡಿಸುವ ಯೋಜನೆ ಅನುಷ್ಠಾನಗೊಳಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ವಿವಿಧ ಜಾತಿಗಳ 20ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡಲಾಗುತ್ತಿದೆ. ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಕೈ ಜೋಡಿಸಬೇಕು ಎಂದು ಪಾಲಿಕೆ ಆಯಕ್ತ ಕಾರ್ತಿಕ್ ಎಂ. ತಿಳಿಸಿದ್ದಾರೆ
ಗ್ರಾಮೀಣದಲ್ಲಿ 1.20 ಲಕ್ಷ ಸಸಿ ನೆಡುವ ಸಂಕಲ್ಪ
ಗ್ರಾಮೀಣ ಭಾಗದಲ್ಲಿ ಅರಣ್ಯ ಸಂಪತ್ತನ್ನು ವೃದ್ಧಿಸುವ, ಪಕ್ಷಿಸಂಕುಲ ಸಂರಕ್ಷಿಸಲು ಸಂಕಲ್ಪತೊಟ್ಟಿರುವ ಜಿಪಂ, ಸಾಮಾಜಿಕ ವಲಯ ಅರಣ್ಯ ವಿಭಾಗವು ಈ ಬಾರಿ ಜಿಲ್ಲೆಯಲ್ಲಿ 320 ಹೆಕ್ಟೇರ್ ಪ್ರದೇಶದಲ್ಲಿ 1.20 ಸಸಿಗಳನ್ನು ನೆಡುವ ಗುರಿ ಹಾಕಿಕೊಂಡಿದೆ. ಹಸಿರುಪಥ ಕಾರ್ಯಕ್ರಮದ ಅಡಿಯಲ್ಲಿ ರಸ್ತೆಯ ಎರಡು ಬದಿ, ರುದ್ರಭೂಮಿ, ಅರಣ್ಯ ಪ್ರದೇಶ, ತೋಟಗಾರಿಕೆ, ಕೃಷಿ, ಕಂದಾಯ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಒಡೆತನದ ಖಾಲಿ ಪ್ರದೇಶ, ಗೈರಾನು, ಸರ್ಕಾರಿ ಶಾಲೆ, ಕಚೇರಿಗಳ ಆವರಣ, ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಸಸಿಗಳನ್ನು ನೆಡಲು ಸ್ಥಳ ಗುರುತಿಸಿದೆ ಎಂದು ಜಿಪಂ ಸಾಮಾಜಿಕ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
.................................